ಹುನಗುಂದ: ಅಮೀನಗಢ ಕರದಂಟು ಕಾರ್ಖಾನೆಗೆ ಭೇಟಿ – ಬಿ.ಶ್ರೀರಾಮುಲು

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲ್ಲೂಕಿನ ಅಮೀನಗಢದಲ್ಲಿರುವ ಪ್ರಸಿದ್ಧ ಕರದಂಟು ತಯಾರಿಕಾ ಕಾರ್ಖಾನೆಗೆ ಮಾಜಿ ಸಚಿವ ಬಿ. ಶ್ರೀರಾಮುಲು ಭೇಟಿ ನೀಡಿ, ಖುದ್ದಾಗಿ ಕರದಂಟು ಸವಿದು ಅದರ ರುಚಿಯನ್ನು ಮೆಚ್ಚಿಕೊಂಡರು.



ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತದ ಕರೆಗೆ ಸ್ಪಂದಿಸಿ, ಅಮೀನಗಢ ಕರದಂಟು ಇಂದು ಕರ್ನಾಟಕ ಮಾತ್ರವಲ್ಲದೇ ದೇಶ-ವಿದೇಶಗಳಲ್ಲೂ ಹೆಸರುವಾಸಿಯಾಗಿದ್ದು, ಸ್ಥಳೀಯ ಉತ್ಪನ್ನವಾಗಿ ವಿಶೇಷ ಗುರುತನ್ನು ಪಡೆದಿದೆ. ಈ ಖಾದ್ಯವು ಎಲ್ಲರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ.

ಇಂದಿನ ಕಲುಷಿತ ಆಹಾರಗಳ ಮಧ್ಯೆಯೂ ಗರ್ಭಿಣಿಯರು ಹಾಗೂ ಯುವಕರಿಗೆ ಆರೋಗ್ಯಕರ, ಪೌಷ್ಟಿಕ ಹಾಗೂ ಸ್ವಾದಿಷ್ಟ ಖಾದ್ಯವನ್ನು ತಯಾರಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಅವರು ಅಭಿಪ್ರಾಯಪಟ್ಟರು. ಸ್ವಾಭಿಮಾನ ಮತ್ತು ಸ್ವ-ಉದ್ಯೋಗದ ಸಂಕೇತವಾದ ಇಂತಹ ಕೈಗಾರಿಕೆಗಳು ಆತ್ಮನಿರ್ಭರ ಭಾರತದ ಬಲವಾಗಿವೆ ಎಂದರು.

ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರೊಂದಿಗೆ ಅವರು ಮುಕ್ತ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ವಿಜಯಾ ಕರದಂಟು ಮಾಲೀಕರಾದ ಸಂತೋಷ್ ಐಹೊಳ್ಳಿ, ವಿಜಯ ಯಡ್ರಾಮಿ, ಗುರು ಚಳ್ಳಗಿಡದ, ರೇಣುಕಾ ರಾಥೋಡ, ಪುಷ್ಪಾ ಮುಳ್ಳೂರು, ಬಸು ಯಡ್ರಾಮಿ, ರಾಹುಲ್ ಸಜ್ಜನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಕಾಮೆಂಟ್‌ಗಳು