ಬೆಂಗಳೂರು–ಪುಣೆ ಹೈಸ್ಪೀಡ್ ರೈಲು ಮಾರ್ಗಕ್ಕೆ ಉತ್ತರ ಕರ್ನಾಟಕ ಮಾರ್ಗ ಪರಿಗಣನೆಗೆ ಮನವಿ

ನವದೆಹಲಿ: ಬೆಂಗಳೂರು–ಪುಣೆ ಹೈಸ್ಪೀಡ್ ರೈಲು ಕಾರಿಡಾರ್‌ಗೆ ವಿಜಯಪುರ–ಬಾಗಲಕೋಟೆ–ಗದಗ–ಹುಬ್ಬಳ್ಳಿ ಮಾರ್ಗವನ್ನು ಪರಿಗಣಿಸಬೇಕೆಂದು ರಾಜ್ಯಸಭಾ ಸದಸ್ಯ ನಾರಾಯಣಸ ಕೆ. ಭಾಂಡಗೆ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಬಲವಾದ ಶಿಕ್ಷಣ ಸಂಸ್ಥೆಗಳು, ಉದಯೋನ್ಮುಖ ಕೈಗಾರಿಕಾ ಕ್ಲಸ್ಟರ್‌ಗಳು, ಲಾಜಿಸ್ಟಿಕ್ಸ್ ಹಬ್‌ಗಳು ಹಾಗೂ ಕೌಶಲ್ಯಪೂರ್ಣ ಯುವಶಕ್ತಿ ಇದ್ದರೂ ಹೈ-ಸ್ಪೀಡ್ ರೈಲು ಸಂಪರ್ಕ ಕಡಿಮೆಯಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಪ್ರದೇಶದ ಮೂಲಕ ಕಾರಿಡಾರ್ ಹಾದುಹೋದರೆ ಜ್ಞಾನ ಕೇಂದ್ರಗಳು, ಎಂಎಸ್‌ಎಂಇಗಳು ಹಾಗೂ ಕೈಗಾರಿಕಾ ವಲಯಗಳು ಭಾರತದ ಪ್ರಮುಖ ಆರ್ಥಿಕ ನಗರಗಳೊಂದಿಗೆ ಸಂಪರ್ಕ ಹೊಂದಿ ಪ್ರಾದೇಶಿಕ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದು ಹೇಳಿದ್ದಾರೆ.

ಇಂತಹ ಕಾರಿಡಾರ್ ಸಮತೋಲಿತ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ವಲಸೆ ಒತ್ತಡ ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟ ಅವರು, ಮುಂದಿನ ಹೈಸ್ಪೀಡ್ ರೈಲು ಯೋಜನೆ ಹಾಗೂ ಕಾರ್ಯಸಾಧ್ಯತಾ ಅಧ್ಯಯನಗಳಲ್ಲಿ ಈ ಮಾರ್ಗವನ್ನು ಪರಿಗಣಿಸಬೇಕೆಂದು ವಿನಂತಿಸಿದ್ದಾರೆ.

ಇದಕ್ಕೂ ಮೊದಲು ಡಿಸೆಂಬರ್‌ 18, 2025ರಂದು ಹೆಚ್ಚುವರಿ ರೈಲುಗಳು, ಹೊಸ ಮಾರ್ಗಗಳು ಮತ್ತು ನಿಲ್ದಾಣ ಸುಧಾರಣೆಗಳ ಕುರಿತು ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾಗಿ ಅವರು ತಿಳಿಸಿದ್ದಾರೆ.

ಕಾಮೆಂಟ್‌ಗಳು