ಬಾಗಲಕೋಟೆ: ಬೆಟ್ಟಿಂಗ್ ಆ್ಯಪ್‌ಗಳ ನಿಷೇಧಕ್ಕೆ ಒತ್ತಾಯಿಸಿ ಪೊಲೀಸರಿಗೆ ಮನವಿ

ಬಾಗಲಕೋಟೆ: ಜಿಲ್ಲೆಯ ಯುವಕರು ಹಾಗೂ ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡುವ ದೃಷ್ಟಿಯಿಂದ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳನ್ನು ಸಂಪೂರ್ಣ ನಿಷೇಧಿಸಲು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಹಿತರಕ್ಷಣಾ ಸಮಿತಿ ಬಾಗಲಕೋಟೆ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿರುವ ಹಿನ್ನೆಲೆ, ವಿವಿಧ ವಿಡಿಯೋ ಗೇಮ್ ಹಾಗೂ ಬೆಟ್ಟಿಂಗ್ ಆ್ಯಪ್‌ಗಳು ಜಾಹೀರಾತುಗಳ ಮೂಲಕ ಯುವಕರ ಮೊಬೈಲ್‌ಗಳಿಗೆ ಸುಲಭವಾಗಿ ತಲುಪುತ್ತಿವೆ. ಈ ಆ್ಯಪ್‌ಗಳ ಪರಿಣಾಮವಾಗಿ ಯುವಕರು ಹಣದ ಲಾಲಸೆಗೆ ಒಳಗಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದು, ಕೆಲವರು ಸಾಲದ ಬಾಧೆಯಿಂದ ಆತ್ಮಹತ್ಯೆಗೆ ಮುಂದಾಗುತ್ತಿರುವ ಘಟನೆಗಳು ದೇಶದ ವಿವಿಧ ಭಾಗಗಳಲ್ಲಿ ವರದಿಯಾಗುತ್ತಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಬಡ ಹಾಗೂ ಮಧ್ಯಮ ವರ್ಗದ ಜನತೆ ಈ ಆನ್‌ಲೈನ್ ಬೆಟ್ಟಿಂಗ್ ಚಟುವಟಿಕೆಗಳಿಂದ ಆರ್ಥಿಕವಾಗಿ ಹಾನಿಗೊಳಗಾಗುತ್ತಿದ್ದು, ಕ್ರೈಂ ಚಟುವಟಿಕೆಗಳು ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ. ಇದರಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನೂ ಕೆಲವು ದಿನಗಳಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಗಳು ನಡೆಯಲಿದ್ದು, ವಿದ್ಯಾರ್ಥಿಗಳು ಈಗಾಗಲೇ ಮಾನಸಿಕ ಒತ್ತಡದಲ್ಲಿದ್ದಾರೆ. ಈ ಸಮಯದಲ್ಲಿ ಬೆಟ್ಟಿಂಗ್ ಆ್ಯಪ್‌ಗಳ ಪ್ರಭಾವ ಹೆಚ್ಚಾದರೆ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಭವಿಷ್ಯಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಆದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಇಂತಹ ಮಾರಕ ಆ್ಯಪ್‌ಗಳನ್ನು ಬಂದ್ ಮಾಡಿಸಲು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಈ ಮನವಿಗೆ ವೀರಣ್ಣ ಹಳೆಗೌಡರ, ರಮೇಶ್ ಸನದಿ, ಕಲೀಮ್ ತಾಂಬೋಳಿ, ಸುಧಾ ಪಾಟೀಲ, ಪಿ.ಎಂ. ಹುಗ್ಗಿ, ದಶರಥ ಚಿಕ್ಕಸಂಶಿ, ಅಭಿಷೇಕ ತಳ್ಳಿಕೇರಿ, ವೈ.ಬಿ. ತಾಂಬೋಳಿ, ಅಬ್ದುಲರಜಾಕ್ ಎಂ. ಬಾಗವಾನ್, ಆಶಾಬೇಗಂ ಬಿರಾದಾರ, ಪ್ರಭುದೇವ ರುದ್ರಾಕ್ಷಿ, ವೀರಣ್ಣ ಹುಂಡೇಕರ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಸಹಿ ಹಾಕಿದ್ದಾರೆ.

ಕಾಮೆಂಟ್‌ಗಳು