ಬಾಗಲಕೋಟೆ:ಬಾಗಲಕೋಟೆ : ಮೋಟಗಿ ಬಸವೇಶ್ವರ ಜಾತ್ರೆ:ಸಂಭ್ರಮದ ರಥೋತ್ಸವ

ಬಾಗಲಕೋಟೆ : ನಗರದ ಐತಿಹಾಸಿಕ ಮೋಟಗಿ ಬಸವೇಶ್ವರ ಜಾತ್ರೆ ರವಿವಾರ ಸಹಸ್ರಾರು ಭಕ್ತರ ಜಯಘೋಷಗಳ ನಡುವೆ ಸಡಗರ ಹಾಗೂ ಸಂಭ್ರಮದಿಂದ ಜರುಗಿತು. ಸಂಜೆ 5 ಗಂಟೆ ವೇಳೆಗೆ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು.

                  ಮೋಟಗಿ ಬಸವೇಶ್ವರ ರಥೋತ್ಸವ

ಕಬ್ಬು, ಹೂವು, ಬಾಳೆ ದಿಂಡು ಹಾಗೂ ನಿಶಾನೆಗಳಿಂದ ಅಲಂಕೃತಗೊಂಡಿದ್ದ ರಥವನ್ನು ಎಳೆಯಲು ಆರಂಭವಾಗುತ್ತಿದ್ದಂತೆ ಭಕ್ತ ಸಮುದಾಯದಿಂದ ಹರ್ಷೋದ್ಘಾರ ಮುಗಿಲು ಮುಟ್ಟಿತು. ರಥೋತ್ಸವದ ಮಾರ್ಗದುದ್ದಕ್ಕೂ ಭಕ್ತರು ಚಪ್ಪಾಳೆ, ಶಿಳ್ಳೆಗಳ ಮೂಲಕ ಸಂಭ್ರಮ ವ್ಯಕ್ತಪಡಿಸಿದರು.

ರಥ ಸಾಗುವ ಮಾರ್ಗದ ಎರಡು ಬದಿಯಲ್ಲಿ ನಿಂತಿದ್ದ ಭಕ್ತರು ಉತ್ತತ್ತಿ, ಕೊಬ್ಬರಿ, ಬಾಳೆಹಣ್ಣು ಅರ್ಪಿಸಿ ಭಕ್ತಿ ಮೆರೆದರು. ರಥವು ಪಾದಗಟ್ಟೆ ತಲುಪುತ್ತಿದ್ದಂತೆ ಜಾತ್ರೆಯ ಸಂಭ್ರಮ ಇಮ್ಮಡಿಗೊಂಡು “ಬಸವೇಶ್ವರ ಮಹಾರಾಜಕೀ ಜೈ” ಎಂಬ ಘೋಷಣೆಗಳು ಮೊಳಗಿದವು.

ಜಾತ್ರೆಯ ನಿಮಿತ್ತ ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ, ಬುತ್ತಿ ಪೂಜೆ, ಆರತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಸಡಗರದಿಂದ ಜರುಗಿದವು. ಭಕ್ತರು ಹೋಳಿಗೆ, ಕಡುಬು, ಹುಗ್ಗಿ ಸೇರಿದಂತೆ ವಿವಿಧ ಖಾದ್ಯಗಳನ್ನು ತಯಾರಿಸಿ ನೈವೇದ್ಯ ಸಮರ್ಪಿಸಿದರು.

ಜಾತ್ರೆ ಅಂಗವಾಗಿ ದೇವಸ್ಥಾನವನ್ನು ವಿದ್ಯುತ್ ಅಲಂಕಾರದಿಂದ ಸಿಂಗಾರಿಸಲಾಗಿತ್ತು. ಬಾಗಲಕೋಟೆ, ವಿದ್ಯಾಗಿರಿ, ನವನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಬೆಳಗ್ಗೆಯಿಂದಲೇ ಆಗಮಿಸಿ ಮೋಟಗಿ ಬಸವೇಶ್ವರರ ದರ್ಶನ ಪಡೆದರು. ಸಂಜೆ ನಡೆದ ಮಹಾರಥೋತ್ಸವದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

ಐದು ದಿನಗಳ ಕಾಲ ಚಿಕ್ಕ ರಥೋತ್ಸವ ಜರುಗಿದ್ದು, ರೈತರ ಜಾತ್ರೆ ಎಂದೇ ಪ್ರಸಿದ್ಧವಾಗಿರುವ ಮೋಟಗಿ ಬಸವೇಶ್ವರ ಜಾತ್ರೆಗೆ ರೈತಾಪಿ ವರ್ಗದ ಭಕ್ತರು ಹೆಚ್ಚಾಗಿ ಆಗಮಿಸುವುದು ಈ ಜಾತ್ರೆಯ ವಿಶೇಷ. ಪ್ರತಿ ವರ್ಷ ಭಾರತ ಹುಣ್ಣಿಮೆ ದಿನದಂದು ಈ ಜಾತ್ರೆ ಭಕ್ತಿಭಾವದಿಂದ ಆಚರಿಸಲಾಗುತ್ತದೆ.


ಕಾಮೆಂಟ್‌ಗಳು