ಬಾಗಲಕೋಟೆ: ಜಗತ್ತಿನಲ್ಲಿಯೇ ಭಾರತೀಯ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದ್ದು, ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಶಕ್ತಿಯ ಮೇಲಿದೆ ಎಂದು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಜಂಟಿ ನಿರ್ದೇಶಕರಾದ ಸಂಜೀವ ಚವ್ಹಾಣ ಹೇಳಿದರು.
ರಾಷ್ಟ್ರೀಯ ಸೇವಾ ಯೋಜನಾ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಬಿ.ವಿ.ವಿ.ಎಸ್ ಪಾಲಿಟೆಕ್ನಿಕ್ (ಸ್ವಾಯತ್ತ) ಸಂಸ್ಥೆಯ ಸಹಯೋಗದಲ್ಲಿಬಿ.ವಿ.ವಿ. ಸಂಘದ ನೂತನ ಸಭಾಭವನದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕ 1 ಮತ್ತು 2ರ ರಾಜ್ಯಮಟ್ಟದ ಯುವಜನೋತ್ಸವಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಮತ್ತು ಮೊಬೈಲ್ ಬಳಕೆಯ ಹೆಚ್ಚಳದಿಂದ ಯುವಜನತೆ ದಾರಿ ತಪ್ಪುತ್ತಿರುವುದು ವಿಷಾದನೀಯ. ಪಾಶ್ಚಿಮಾತ್ಯರು ಭಾರತೀಯ ಸಂಸ್ಕೃತಿಯನ್ನು ಮೆಚ್ಚಿ ಆಚರಿಸುತ್ತಿರುವ ಸಂದರ್ಭದಲ್ಲಿ ಭಾರತೀಯರು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಅವಿಭಕ್ತ ಕುಟುಂಬ ವ್ಯವಸ್ಥೆ, ಸಂಬಂಧಗಳ ಮೌಲ್ಯ ಹಾಗೂ ಪರಸ್ಪರ ಸಹಕಾರ ನಮ್ಮ ಸಂಸ್ಕೃತಿಯ ಪ್ರಮುಖ ಅಂಶಗಳಾಗಿವೆ. ಇಂತಹ ಶ್ರೀಮಂತ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮದಾಗಿದೆ ಎಂದು ಹೇಳಿದರು.
ನೀರು, ವಿದ್ಯುತ್ ಮತ್ತು ಪೆಟ್ರೋಲ್‌ನ ಮಿತ ಬಳಕೆ ಅಗತ್ಯವಿದೆ. ಭೂಮಿಯ ಮೇಲೆ ಕೇವಲ 3 ಶೇಕಡಾ ಮಾತ್ರ ಸಿಹಿನೀರು ಲಭ್ಯವಿದ್ದು, ಉಳಿದ 97 ಶೇಕಡಾ ಉಪ್ಪುನೀರು ಆಗಿದೆ. ಮುಂದಿನ ಪೀಳಿಗೆಗೆ ನೀರಿನ ಅಭಾವ ಉಂಟಾಗದಂತೆ ನೀರನ್ನು ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು. ನಾಲ್ಕು ದಿನಗಳ ಈ ಶಿಬಿರದಲ್ಲಿ ಸಂಸ್ಕೃತಿ-ಪರಂಪರೆಯ ವಿನಿಮಯದೊಂದಿಗೆ ಉತ್ತಮ ನಾಗರಿಕರಾಗಿ ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಭಾರತ ಸರ್ಕಾರದ ಎನ್‌ಎಸ್‌ಎಸ್ ಪ್ರಾಂತೀಯ ನಿರ್ದೇಶಕ ಗಿರಿಧರ ಉಪಾಧ್ಯಯ, ಸಮಾಜಸೇವೆಯ ಮೂಲಕ ವ್ಯಕ್ತಿತ್ವ ವಿಕಸನಗೊಳಿಸುವುದೇ ಎನ್‌ಎಸ್‌ಎಸ್‌ನ ಉದ್ದೇಶವಾಗಿದ್ದು, ಎಲ್ಲರ ಭಾಗವಹಿಸುವಿಕೆ ಮುಖ್ಯ ಎಂದರು.
ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ ಡಾ. ಪ್ರತಾಪ ಲಿಂಗಯ್ಯ ಮಾತನಾಡಿ, 1969ರಲ್ಲಿ ಸ್ಥಾಪಿತವಾದ ಎನ್‌ಎಸ್‌ಎಸ್ ಇಂದು ದೇಶದಾದ್ಯಂತ 45 ಲಕ್ಷಕ್ಕೂ ಅಧಿಕ ಸ್ವಯಂಸೇವಕರನ್ನು ಹೊಂದಿರುವ ಬೃಹತ್ ಸಂಘಟನೆಯಾಗಿದೆ. ಕರ್ನಾಟಕದಲ್ಲಿಯೇ 6.5 ಲಕ್ಷ ಸ್ವಯಂಸೇವಕರು ಇರುವುದೂ ಹೆಮ್ಮೆಯ ಸಂಗತಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಘದ ಗೌರವ ಕಾರ್ಯದರ್ಶಿ ಮಹೇಶ್ ಅಥಣಿ ಮಾತನಾಡಿ, ಶಿಕ್ಷಣವೇ ಬಾಳಿನ ಬೆಳಕು. ಪರಿಸರ ಹಾಗೂ ಗ್ರಾಮಗಳನ್ನು ಶುಚಿಯಾಗಿ ಇಟ್ಟು ಆರೋಗ್ಯಪೂರ್ಣ ಜೀವನ ನಡೆಸಲು ಯುವಜನರಲ್ಲಿ ಜಾಗೃತಿ ಮೂಡಿಸುವ ಉತ್ತಮ ಅವಕಾಶ ಈ ಶಿಬಿರವಾಗಿದೆ ಎಂದರು.
ವೇದಿಕೆಯಲ್ಲಿ ರಾಜ್ಯ ಎನ್‌ಎಸ್‌ಎಸ್ ಸಂಯೋಜಕ ಡಾ. ಗುರುಪ್ರಸಾದ್ ಹೂಗಾರ, ಆಡಳಿತಾಧಿಕಾರಿ ಪ್ರೊ. ವಿ.ಆರ್. ಶಿರೋಳ, ಪ್ರಾಚಾರ್ಯ ಎಸ್.ಎಸ್. ಹುಬ್ಬಳ್ಳಿ ಹಾಗೂ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯದ ವಿವಿಧ 12 ವಿಶ್ವವಿದ್ಯಾಲಯಗಳಿಂದ ಆಯ್ಕೆಯಾದ 115 ವಿದ್ಯಾರ್ಥಿಗಳು ಮತ್ತು 10 ಎನ್‌ಎಸ್‌ಎಸ್ ಅಧಿಕಾರಿಗಳು ಯುವಜನೋತ್ಸವದಲ್ಲಿ ಭಾಗವಹಿಸಿದ್ದು, ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಶ್ರಮದಾನ, ವಿಶೇಷ ಉಪನ್ಯಾಸ, ಸಾಂಸ್ಕೃತಿಕ ಮತ್ತು ಸಾಹಿತ್ಯ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮಕ್ಕೂ ಮುನ್ನ ಬೀಳೂರ ಅಜ್ಜನ ಗುಡಿಯಿಂದ ನೂತನ ಸಭಾಭವನದವರೆಗೆ ಸಾಂಸ್ಕೃತಿಕ ಮೆರವಣಿಗೆ ಜರುಗಿತು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ