ಬಾಗಲಕೋಟೆ: ಸ್ಮಾರ್ಟ್‌ಫೋನ್ ಯುಗದಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಶಿಸ್ತು ಪಾಲನೆ ಅತ್ಯಗತ್ಯವಾಗಿದ್ದು, ಶಿಸ್ತಿನಿಂದಲೇ ಭವಿಷ್ಯದಲ್ಲಿ ಉನ್ನತ ಹುದ್ದೆಗಳಿಗೆ ಏರಲು ಸಾಧ್ಯವೆಂದು ಬಾಗಲಕೋಟೆ ಡಿವೈಎಸ್ಪಿ ಗಜಾನನ ಸುತಾರ ಹೇಳಿದರು.
ನಗರದ ಶಿಗಿಕೇರಿ ಕ್ರಾಸ್‌ನಲ್ಲಿರುವ ಶ್ರೀ ದೇವಿಬಾಯಿ ಐಟಿಐ ಕಾಲೇಜು ಮತ್ತು ಧರ್ತಿ ಪಬ್ಲಿಕ್ ಶಾಲೆಗೆ ಭೇಟಿ ನೀಡಿದ ಅವರು, ಐಟಿಐ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಹದಿಹರೆಯದ ಯುವಕರು ಕೆಟ್ಟ ವ್ಯಸನಗಳಿಗೆ ಬಲಿಯಾಗದೇ, ಅಕ್ರಮ ಚಟುವಟಿಕೆಗಳಿಂದ ದೂರವಿದ್ದು, ತಂದೆ-ತಾಯಿಗಳಿಗೆ ಒಳ್ಳೆಯ ಹೆಸರು ತರಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಬಿಟ್ಟು ಮೊಬೈಲ್ ಚಟಕ್ಕೆ ದಾಸರಾಗಬಾರದು. ತಂದೆ-ತಾಯಿಗಳು ಕಷ್ಟಪಟ್ಟು ದುಡಿದು ಮಕ್ಕಳನ್ನು ಓದಲು ಕಳುಹಿಸುತ್ತಿದ್ದಾರೆ. ಅವರ ಶ್ರಮಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕು ಎಂದರು.
ಇದೇ ವೇಳೆ ಸಂಚಾರದ ವೇಳೆ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಹೆಲ್ಮೆಟ್ ಮತ್ತು ಸೀಟ್‌ಬೆಲ್ಟ್ ಧರಿಸಿ ತಮ್ಮ ಜೀವವನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು. ತಂದೆ-ತಾಯಿಗಳು ನೀಡಿದ ಅಮೂಲ್ಯ ಜೀವನವನ್ನು ನಿರ್ಲಕ್ಷ್ಯದಿಂದ ಹಾಳು ಮಾಡಿಕೊಳ್ಳಬಾರದು ಎಂದು ತಿಳಿಸಿದರು.
ನಂತರ ಧರ್ತಿ ಪಬ್ಲಿಕ್ ಶಾಲೆಗೆ ಭೇಟಿ ನೀಡಿದ ಅವರು ಪುಟಾಣಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಶಿಕ್ಷಣದ ಮಹತ್ವವನ್ನು ತಿಳಿಸಿದರು. ಐಟಿಐ ಕಾಲೇಜು ಮತ್ತು ಧರ್ತಿ ಪಬ್ಲಿಕ್ ಶಾಲೆಯ ಸ್ವಚ್ಛತೆ, ಸುರಕ್ಷತೆ ಹಾಗೂ ವಿದ್ಯಾರ್ಥಿಗಳ ಶಿಸ್ತನ್ನು ಮೆಚ್ಚಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಸ್.ಆರ್. ರಾಠೋಡ, ಉಪಾಧ್ಯಕ್ಷ ಅರ್ಜುನ್ ಚವ್ಹಾಣ, ಕಾರ್ಯದರ್ಶಿ ಸಂತೋಷ ಲಮಾಣಿ, ಐಟಿಐ ಪ್ರಾಂಶುಪಾಲ ರವಿ ಲಮಾಣಿ, ಧರ್ತಿ ಪಬ್ಲಿಕ್ ಶಾಲೆಯ ಮುಖ್ಯಗುರುಮಾತೆ ಚಂದ್ರಕಲಾ ರಾಠೋಡ ಹಾಗೂ ಶಿಕ್ಷಕ-ಸಿಬ್ಬಂದಿ ಉಪಸ್ಥಿತರಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ