ಹುನಗುಂದ:ಅಂತೂ ಇಂತೂ ಕೂಡಿ ಬಂತು ಕಂದಗಲ್ಲ ರಸ್ತೆ ದುರಸ್ತಿ ಭಾಗ್ಯ


ಇಳಕಲ್ಲ:ಕಂದಗಲ್ಲ ರಸ್ತೆಯಲ್ಲಿ ಸಂಚಾರ ಮಾಡಬೇಕಾದರೆ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಹೋಗಬೇಕಾದ ಪರಿಸ್ಥಿತಿ ಇತ್ತು. ಯಾಮಾರಿದರೆ ಕೈ-ಕಾಲು ಮುರಿದುಕೊಳ್ಳುವುದು ಖಚಿತವಾಗಿತ್ತು.


ಇಳಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದ ರಸ್ತೆ ಕಳೆದ 10 ವರ್ಷಗಳಿಂದ ದುರಸ್ತಿ ಕಾಣದೆ ಸಂಪೂರ್ಣ ಹದಗೆಟ್ಟ ಸ್ಥಿತಿಯಲ್ಲಿತ್ತು. ಇಳಕಲ್ಲ ನಗರದಿಂದ ಕಂದಗಲ್ಲ ಗ್ರಾಮಕ್ಕೆ ಸುಮಾರು 18 ಕಿಲೋಮೀಟರ್ ದೂರವಿದ್ದು, ಈ ಅಲ್ಪ ದೂರವನ್ನೇ ದಾಟಲು ಕನಿಷ್ಠ ಎರಡು ಗಂಟೆಗಳ ಸಮಯ ಬೇಕಾಗುತ್ತಿತ್ತು.

ನಗರದಿಂದ ಚಿಕ್ಕ ಓತಗೇರಿ ಗ್ರಾಮದವರೆಗೆ ಸುಮಾರು 8 ಕಿಲೋಮೀಟರ್ ರಸ್ತೆ ಸ್ವಲ್ಪ ಮಟ್ಟಿಗೆ ಉತ್ತಮವಾಗಿದ್ದರೂ, ಅಲ್ಲಿಂದ ಮುಂದೆ ಕಂದಗಲ್ಲವರೆಗೆ ರಸ್ತೆ ಸಂಪೂರ್ಣ ಹದಗೆಟ್ಟು, ಗುಂಡಿಗಳ ದರ್ಬಾರ್ ನಡೆಯುತ್ತಿತ್ತು.

ಬೇಸಿಗೆಯಲ್ಲಿ ಧೂಳಿನ ಕಾಟ ತಾಳಲಾಗದಷ್ಟು ಇತ್ತು. ಮಳೆಗಾಲದಲ್ಲಿ ರಸ್ತೆ ಗುಂಡಿಗಳಲ್ಲಿ ನೀರು ನಿಂತು, ಸಣ್ಣ-ಸಣ್ಣ ಕೆರೆಗಳಂತೆ ಕಾಣುತ್ತಿತ್ತು. ಬೈಕ್ ಹಾಗೂ ಇತರ ವಾಹನಗಳಲ್ಲಿ ಸಂಚರಿಸುವವರು ಸಕ೯ಸ್ ಮಾಡುವಂತೆ ಸಾಗಬೇಕಾಗುತ್ತಿತ್ತು.

ವಿಶೇಷವಾಗಿ ಅನಾರೋಗ್ಯರು ಹಾಗೂ ಗರ್ಭಿಣಿಯರನ್ನು ಪಟ್ಟಣದ ಆಸ್ಪತ್ರೆಗೆ ಕರೆದೊಯ್ಯುವಾಗ ಎದುರಾಗುವ ಕಷ್ಟ ಹೇಳತೀರದು. ಅಂಥ ಸಂದರ್ಭದಲ್ಲಿ ದೇವರೇ ಕಾಪಾಡಬೇಕಾಗಿತ್ತು ಎಂಬುದು ಗ್ರಾಮಸ್ಥರ ಅಳಲು.

ಗ್ರಾಮಸ್ಥರ ಬಹುದಿನದ ಬೇಡಿಕೆಯಂತೆ, ರಸ್ತೆ ದುರಸ್ತಿ ಕುರಿತು ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು. ಅದರ ಫಲವಾಗಿ ಇದೀಗ ಕಂದಗಲ್ಲ ರಸ್ತೆ ದುರಸ್ತಿ ಕಾರ್ಯಕ್ಕೆ ಚಾಲನೆ ದೊರೆತಿದೆ. ಕಾಮಗಾರಿ ಭರದಿಂದ ಸಾಗುತ್ತಿದ್ದು, ಕಂದಗಲ್ಲ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಸಂತಸ ಮೂಡಿಸಿದೆ.

#ಕಂದಗಲ್ಲ #ಇಳಕಲ್ಲ #ರಸ್ತೆದುರಸ್ತಿ #ಗ್ರಾಮಸುದ್ದಿ #PetkarMedia

ಸ್ಥಳೀಯ ಸುದ್ದಿಗಳಿಗಾಗಿ 👉 Follow @PetkarMedia

ಕಾಮೆಂಟ್‌ಗಳು