ನವದೆಹಲಿ: ಬಾಗಲಕೋಟೆ ಜಿಲ್ಲೆಯ ವಿವಿಧ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಪ್ರಸ್ತುತ ಹಣಕಾಸು ವರ್ಷದಲ್ಲೇ ಅನುದಾನ ಬಿಡುಗಡೆಗೊಳಿಸುವುದಾಗಿ ಕೇಂದ್ರ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಮನ್ಸುಖ್ ಮಾಂಡವೀಯ ಭರವಸೆ ನೀಡಿದ್ದಾರೆ.
ನವದೆಹಲಿಯಲ್ಲಿ ಇಂದು ಸಚಿವರನ್ನು ಬಾಗಲಕೋಟೆ ರಾಜ್ಯಸಭಾ ಸದಸ್ಯರಾದ ನಾರಾಯಣ ಸಾ ಬಾಂಢಗೆ ಭೇಟಿ ಮಾಡಿದರು, ಈಗಾಗಲೇ ಮಂಜೂರಾಗಿರುವ ಹಾಗೂ ವಿವಿಧ ಹಂತಗಳಲ್ಲಿ ಇರುವ ಯೋಜನೆಗಳಿಗೆ ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಸಲ್ಲಿಸಿದೆ. ಇದಕ್ಕೆ ಸ್ಪಂದಿಸಿದ ಸಚಿವರು, ಸಂಬಂಧಿತ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಈ ವರ್ಷದಲ್ಲೇ ಅನುದಾನ ಬಿಡುಗಡೆ ಮಾಡಲಾಗುವುದಾಗಿ ತಿಳಿಸಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ–ಬನಹಟ್ಟಿ ತಾಲ್ಲೂಕು ಕ್ರೀಡಾಂಗಣದಲ್ಲಿ 400 ಮೀಟರ್ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ ಹಾಗೂ ಬಹುಉದ್ದೇಶದ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳು ಈಗಾಗಲೇ ಸಲ್ಲಿಕೆಯಾಗಿದ್ದು, ಕೆಲ ಯೋಜನೆಗಳು DPAC ಸಮಿತಿಯ ಅನುಮೋದನೆಗಾಗಿ ಕಾಯುತ್ತಿವೆ. ಇದೇ ವೇಳೆ, ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಅಸ್ಟ್ರೋ ಹಾಕಿ ಟರ್ಫ್, ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ ಹಾಸಿಕೆ, ಬಹುಉದ್ದೇಶದ ಒಳಾಂಗಣ ಕ್ರೀಡಾಂಗಣ ಹಾಗೂ ಈಜುಕೊಳ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳು ಮೌಲ್ಯಮಾಪನ ಹಾಗೂ ಅನುಮೋದನೆ ಹಂತದಲ್ಲಿವೆ.
ಈ ಎಲ್ಲಾ ಯೋಜನೆಗಳಿಗೆ ಅನುದಾನ ಬಿಡುಗಡೆಯಾದಲ್ಲಿ ಜಿಲ್ಲೆಯ ಕ್ರೀಡಾ ಮೂಲಸೌಕರ್ಯದಲ್ಲಿ ಮಹತ್ವದ ಪ್ರಗತಿ ಕಂಡುಬರುವುದರ ಜೊತೆಗೆ, ಯುವ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ತರಬೇತಿ ಸೌಲಭ್ಯಗಳು ಲಭ್ಯವಾಗಲಿವೆ ಎಂದು ತಿಳಿಸಲಾಗಿದೆ ಎಂದು ಮುಖಪುಟದಲ್ಲಿ ಪ್ರಕಟಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ