ಬಾದಾಮಿ:ತಾಲೂಕಿನ ಯಂಕಂಚಿ-ಮಣಿನಾಗರದಲ್ಲಿರುವ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಗೆ ಶುಕ್ರವಾರ ಬೆಂಗಳೂರಿನ ಎಸ್‌ಎಸ್‌ಕೆ ರಾಜ್ಯ ಯೋಜನಾ ನಿರ್ದೇಶಕರ ಕಚೇರಿಯ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭೇಟಿಯ ವೇಳೆ ಶಾಲೆಯ ಆಡಳಿತಾತ್ಮಕ ವ್ಯವಸ್ಥೆ ಕುರಿತು ಚರ್ಚಿಸಿ, ಸಂಬಂಧಿಸಿದ ಎಲ್ಲಾ ಕಡತಗಳನ್ನು ವೀಕ್ಷಿಸಿದ ಅವರು ದಾಖಲೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳ ಹಕ್ಕುಗಳ ಐದು ರಜಿಷ್ಠರು, ಶಿಕ್ಷಕಿಯರು ಹಾಗೂ ಪಾಲಕ-ಪೋಷಕರ ಬದ್ಧತಾ ಸ್ವೀಕಾರ ಪತ್ರಗಳ ಕಡತಗಳನ್ನು ಪರಿಶೀಲಿಸಿ, ಶಾಲೆಗೆ ಆಗಮಿಸುವ ಪ್ರತಿಯೊಬ್ಬರಿಂದಲೂ ಬದ್ಧತಾ ಸ್ವೀಕಾರ ಪತ್ರ ಪಡೆಯುವಂತೆ ಸೂಚಿಸಿದರು.
ಶಾಲೆಯಲ್ಲಿರುವ ಬಯೋಮೆಟ್ರಿಕ್ ವ್ಯವಸ್ಥೆ, ಸಿಸಿ ಕ್ಯಾಮೆರಾ, ಪೊಲೀಸ್ ಬುಕ್ ಪಾಯಿಂಟ್, ಊಟ-ಉಪಹಾರ ಹಾಗೂ ಡ್ರೈಫ್ರೂಟ್ಸ್ ಸೇರಿದಂತೆ ದಿನಬಳಕೆ ಸಾಮಗ್ರಿಗಳ ದಾಖಲೆಗಳನ್ನು ಪರಿಶೀಲಿಸಿ ಮಕ್ಕಳೊಂದಿಗೆ ನೇರ ಸಂವಾದ ನಡೆಸಿದರು. ರಜೆ ಪತ್ರ, ಪಾಲಕರ ಸಹಿ ರಜಿಷ್ಠರು, ಸಭೆಗಳು ಹಾಗೂ ವೈದ್ಯಕೀಯ ತಪಾಸಣೆ ಕುರಿತ ಮಾಹಿತಿಯನ್ನು ಮಕ್ಕಳಿಂದ ತಿಳಿದುಕೊಂಡು, ಇನ್ನಷ್ಟು ಸೌಲಭ್ಯಗಳ ಅಗತ್ಯವಿದೆಯೇ ಎಂದು ಪ್ರಶ್ನಿಸಿದಾಗ ಕಂಪೌಂಡ್ ದುರಸ್ತಿ ಮಾಡಬೇಕೆಂದು ಮಕ್ಕಳು ಮನವಿ ಸಲ್ಲಿಸಿದರು. ಇದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.
ವಸತಿ ನಿಲಯದ ಕಂಪ್ಯೂಟರ್ ಕೊಠಡಿ, ಅಡುಗೆ ಕೊಠಡಿ, ದಾಸ್ತಾನು ಕೊಠಡಿ, ಶೌಚಾಲಯ ಹಾಗೂ ಸ್ನಾನಗೃಹಗಳ ಸ್ವಚ್ಛತೆ ಮತ್ತು ಶಾಲಾ ಆವರಣದ ಸುವ್ಯವಸ್ಥೆಯನ್ನು ಗಮನಿಸಿದ ಅವರು, ಪಾಲಕರಿಗಾಗಿ ವ್ಯವಸ್ಥೆ ಮಾಡಿರುವ ಸಿಮೆಂಟ್ ಬೆಂಚ್‌ಗಳನ್ನು ಶ್ಲಾಘಿಸಿ, ಇದೊಂದು ಮಾದರಿ ಶಾಲೆ ಎಂದು ಅಭಿಪ್ರಾಯಪಟ್ಟರು.
ಮಕ್ಕಳ ಶಿಸ್ತು, ಹಸಿರುಮಯ ಶಾಲಾವಾತಾವರಣ, ಗುಣಾತ್ಮಕ ಕಲಿಕೆ, ಶುಚಿರುಚಿಯಾದ ಊಟ ವ್ಯವಸ್ಥೆ ಹಾಗೂ ಸರ್ಕಾರದ ಅನುದಾನದ ಸಮರ್ಪಕ ಬಳಕೆಯನ್ನು ಮೆಚ್ಚಿದ ಅವರು, ಊಟದ ಮೆನು ಜೊತೆಗೆ ಡ್ರೈಫ್ರೂಟ್ಸ್ ಮೆನು ಸೇರಿಸಲು ಸಲಹೆ ನೀಡಿದರು. ಇಲಾಖೇತರ ಸಿಬ್ಬಂದಿಯ ವೇತನ ಸಂಬಂಧಿತ ವಿಚಾರಕ್ಕೂ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಡಿವೈಪಿಸಿ ಕಚೇರಿಯ ತಾಂತ್ರಿಕ ಸಹಾಯಕ ಅರವಿಂದ ಜವಳಗಿ, ಉಪನಿರ್ದೇಶಕರ ಕಚೇರಿಯ ವಿಷಯ ಪರಿಶೀಲಕ ಮೋಹನಕುಮಾರ ನ್ಯಾಮಗೌಡ, ಮುಖ್ಯ ಶಿಕ್ಷಕಿ ಬಸಮ್ಮ ನರಸಾಪೂರ ಹಾಗೂ ಇಲಾಖೇತರ ಸಿಬ್ಬಂದಿ ಸಕ್ಕಮ್ಮ, ಅಮೃತಾ, ಬೆನಾಳ, ನಾಗಮ್ಮ, ಲಕ್ಷ್ಮೀ ಮತ್ತು ಅಡುಗೆ ಸಿಬ್ಬಂದಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ