ಬಾಗಲಕೋಟೆ:ಬಾಲ್ಯ ವಿವಾಹ ಮುಕ್ತಗೊಳಿಸುವಲ್ಲಿ ಮಕ್ಕಳ ಪಾತ್ರವೂ ಮಹತ್ವದ್ದಾಗಿದ್ದು, ಮಕ್ಕಳು ಮುಕ್ತವಾಗಿ ಪಾಲ್ಗೊಂಡಾಗ ಹಲವಾರು ಬಾಲ್ಯವಿವಾಹಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್. ಶಶಿಧರ ಶೆಟ್ಟಿ ಹೇಳಿದರು.
ಜಿಲ್ಲಾ ಪಂಚಾಯತ್ ನೂತನ ಸಭಾಂಗಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಪಂಚಾಯತ್ ಹಾಗೂ ವಕೀಲರ ಸಂಘ ಬಾಗಲಕೋಟ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ “ಬಾಲ್ಯ ವಿವಾಹ ಮುಕ್ತಗೊಳಿಸುವಲ್ಲಿ ಮಕ್ಕಳ ಪಾತ್ರ” ಕಾರ್ಯಗಾರದಲ್ಲಿ ಅವರು ಮಾತನಾಡಿದರು. ಬಾಲ್ಯ ವಿವಾಹದ ಪ್ರಕರಣಗಳಲ್ಲಿ ಮಕ್ಕಳು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದರ ಜೊತೆಗೆ ತಮ್ಮ ಶಾಲಾ ಸಹಪಾಠಿಗಳು, ನೆರೆಹೊರೆಯವರು ಅಥವಾ ಸಂಬಂಧಿಕರ ಮಕ್ಕಳ ಮದುವೆ 18 ವರ್ಷಕ್ಕಿಂತ ಮುಂಚಿತವಾಗಿ ನಡೆಯುತ್ತಿರುವುದನ್ನು ಗಮನಿಸಿದ ತಕ್ಷಣ 1098 ಅಥವಾ 112ಕ್ಕೆ ಕರೆ ಮಾಡಿ ಇತರ ಮಕ್ಕಳನ್ನು ರಕ್ಷಿಸಬಹುದು ಎಂದು ತಿಳಿಸಿದರು. ವಯಸ್ಕರಿಗಿಂತ ಮಕ್ಕಳಿಗೆ ಹೆಚ್ಚಿನ ಕಾನೂನು ರಕ್ಷಣೆ ಇದ್ದು, ಮಕ್ಕಳು ಹೆದರಬೇಕಾದ ಅಗತ್ಯವಿಲ್ಲ ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ. ವಿಜಯ ಮಾತನಾಡಿ, ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಮಕ್ಕಳು ಅರಿವು ಹೊಂದಿದರೆ ತಾವು ಬಲಿಯಾಗುವುದನ್ನು ತಪ್ಪಿಸಿಕೊಳ್ಳಬಹುದು. ಮಕ್ಕಳ ಭವಿಷ್ಯ ಸುರಕ್ಷಿತವಾಗಿರಲು ಪಾಲಕರು, ಶಿಕ್ಷಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಒಟ್ಟಾಗಿ ಜಾಗೃತಿ ಮೂಡಿಸಬೇಕು. ಬಾಗಲಕೋಟೆ ಜಿಲ್ಲೆಯನ್ನು ಬಾಲ್ಯ ವಿವಾಹದಿಂದ ಮುಕ್ತಗೊಳಿಸುವ ಸಂಕಲ್ಪ ಕೈಗೊಳ್ಳಬೇಕು ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಶ್ ಕರ್ಣಂ ಮಾತನಾಡಿ, ಬಾಲ್ಯ ವಿವಾಹವು ಒಂದು ಸಾಮಾಜಿಕ ಪಿಡುಗಾಗಿದ್ದು ಶಿಕ್ಷಣವೇ ಅದಕ್ಕೆ ಪ್ರಮುಖ ಮದ್ದು. ಶಿಕ್ಷಣಕ್ಕೆ ಒತ್ತು ನೀಡಿದಾಗ ಇಂತಹ ಪ್ರಕರಣಗಳು ಕಡಿಮೆಯಾಗುತ್ತವೆ. ಸರ್ಕಾರದ ಜಾಗೃತಿ ಕಾರ್ಯಕ್ರಮಗಳ ಸದ್ಬಳಕೆಯನ್ನು ಸಮುದಾಯಗಳು ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಬಾಲ್ಯವು ಬೆಳವಣಿಗೆಯ ಹಂತವಾಗಿದ್ದು, ಈ ಅವಧಿಯಲ್ಲಿ ವಿವಾಹವಾದರೆ ಮಕ್ಕಳ ಬೆಳವಣಿಗೆ ಕುಂಠಿತಗೊಂಡು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಬಾಲ್ಯ ವಿವಾಹವನ್ನು ವಿರೋಧಿಸಿ ನಮ್ಮ ಊರು-ಕೇರಿಗಳನ್ನು ಬಾಲ್ಯ ವಿವಾಹ ಮುಕ್ತಗೊಳಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಬಾಲ್ಯ ವಿವಾಹ ನಿಷೇಧ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಜಿ. ಗದ್ದಿ, ಕಾರ್ಯದರ್ಶಿ ಪಿ.ಹೆಚ್. ನಾರಾಯಣಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ