ಬಾಗಲಕೋಟೆ:ಈರುಳ್ಳಿ ಬೆಳೆಗೆ ವೈಜ್ಞಾನಿಕ ಸ್ಪರ್ಶ ಅವಶ್ಯ: ಡಾ. ವಿಷ್ಣುವರ್ಧನ

ಬಾಗಲಕೋಟೆ: ಜಿಲ್ಲೆಯ ಪ್ರಮುಖ ಬೆಳೆಗಳಲ್ಲೊಂದಾದ ಈರುಳ್ಳಿ ಬೆಳೆಗೆ ವೈಜ್ಞಾನಿಕ ಹಾಗೂ ತಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಂಡಾಗ ಮಾತ್ರ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎಂದು ತೋಟಗಾರಿಕಾ ವಿಶ್ವವಿದ್ಯಾನಿಲಯದ ಕುಲಪತಿ ಡಾ. ವಿಷ್ಣುವರ್ಧನ ಹೇಳಿದರು.


ಮಂಗಳವಾರ ನಡೆದ ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾಲಯದ ಈರುಳ್ಳಿ ಬೆಳೆ ಕ್ಷೇತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬೆಳೆಯಲಾಗುತ್ತಿರುವ ಬೆಳೆಗಳಲ್ಲಿ ಈರುಳ್ಳಿ ಪ್ರಮುಖವಾಗಿದ್ದು, ಈರುಳ್ಳಿ ಬೀಜ ತಳಿಗಳನ್ನು ಬದಲಾಯಿಸಿ ಕೃಷಿ ಮಾಡಿದರೆ ಹೆಚ್ಚಿನ ಇಳುವರಿ ಪಡೆಯಬಹುದು ಎಂದರು. ರೈತರಿಗೆ ಸಂಶೋಧನೆಗೊಳಗಾದ ಉತ್ತಮ ಗುಣಮಟ್ಟದ ಬೀಜ ದೊರಕದೇ ಇರುವುದರಿಂದ ಇಳುವರಿ ಕುಂಠಿತವಾಗುತ್ತಿದೆ. ಇದನ್ನು ತಡೆಗಟ್ಟಲು ಉತ್ತಮ ತಳಿ ಹಾಗೂ ಗುಣಮಟ್ಟದ ಬೀಜಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹೊಲದಲ್ಲಿ ಸಾಕಷ್ಟು ಪೋಷಕಾಂಶಗಳನ್ನು ಹಾಕಿ ಸರಿಯಾದ ನಿರ್ವಹಣೆ ಮಾಡಿದರೂ ನಿರೀಕ್ಷಿತ ಮಟ್ಟದ ಬೆಳೆ ಬರದೇ ಇರುವುದಕ್ಕೆ ಕಳಪೆ ಬೀಜಗಳೇ ಕಾರಣವಾಗುತ್ತವೆ. ಅಂತಹ ಬೀಜಗಳಿಂದ ಹಲವು ರೋಗ ಸಮಸ್ಯೆಗಳು ಕೂಡ ಕಂಡುಬರುತ್ತವೆ ಎಂದು ಅವರು ಹೇಳಿದರು. ಜಿಲ್ಲೆಯ ಅನೇಕ ರೈತರು ಉತ್ತಮ ಗುಣಮಟ್ಟದ ಬೀಜ ಉತ್ಪಾದನಾ ಘಟಕಗಳನ್ನು ಆರಂಭಿಸಿದ್ದು, ಅವರಿಗೆ ಅಗತ್ಯವಾದ ಮಾರ್ಗದರ್ಶನ ನೀಡಲು ತೋಟಗಾರಿಕಾ ವಿಶ್ವವಿದ್ಯಾನಿಲಯ ಸದಾ ಸಿದ್ಧವಾಗಿದೆ ಎಂದರು.

ಪ್ರತಿ ವರ್ಷ ತೋಟಗಾರಿಕಾ ವಿಶ್ವವಿದ್ಯಾನಿಲಯದಲ್ಲಿ ವಿವಿಧ ಬೆಳೆಗಳ ಪ್ರಾತ್ಯಕ್ಷತೆ ನಡೆಸಲಾಗುತ್ತಿದ್ದು, ರೈತರಿಂದಲೂ ಕಲಿಯಬೇಕಾದದ್ದು ಬಹಳ ಇದೆ. ಮಾದರಿ ಕೃಷಿ ವಿಧಾನಗಳನ್ನು ಅಳವಡಿಸಿಕೊಂಡು ವಿಶ್ವವಿದ್ಯಾನಿಲಯ ನೀಡುವ ಸಲಹೆಗಳನ್ನು ಅನುಸರಿಸಿದರೆ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಕೇವಲ ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾಗಿ, ಸಾವಯವ ಗೊಬ್ಬರ ಬಳಕೆ ಕಡಿಮೆಯಾಗಿರುವುದರಿಂದ ಇಳುವರಿ ಕುಂಠಿತವಾಗುತ್ತಿದೆ ಹಾಗೂ ಭೂಮಿಯ ಆರೋಗ್ಯ ಹದಗೆಡುತ್ತಿದೆ. ಆದ್ದರಿಂದ ರೈತರು ಸಾವಯವ ಕೃಷಿಯತ್ತ ಮುಖ ಮಾಡಬೇಕು ಎಂದು ತಿಳಿಸಿದರು.

ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ಹಕಾತಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಕಳಪೆ ಬೀಜ, ಹವಾಮಾನ ಏರಿಳಿತ ಮತ್ತು ಬೆಲೆ ಸಮಸ್ಯೆಗಳ ಕಾರಣ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಯಾವುದೇ ಬೆಳೆ ಬೆಳೆಯಲು ಗುಣಮಟ್ಟದ ಬೀಜ ಮತ್ತು ಸೂಕ್ತ ಪೋಷಕಾಂಶಗಳ ನಿರ್ವಹಣೆ ಅತ್ಯವಶ್ಯಕ ಎಂದು ಹೇಳಿದರು. ಕಳೆದ ವರ್ಷ ಒಂದು ಲಕ್ಷ ಎಕರೆಗೂ ಅಧಿಕ ಭೂಮಿಯಲ್ಲಿ ಈರುಳ್ಳಿ ಬೆಳೆಯಲಾಗಿದ್ದರೂ, ಅಷ್ಟೊಂದು ಭೂಮಿಗೆ ಬೇಕಾದಷ್ಟು ಬೀಜ ಜಿಲ್ಲೆಯಲ್ಲಿ ಲಭ್ಯವಾಗುವುದಿಲ್ಲ ಎಂದರು.

ತೋಟಗಾರಿಕಾ ವಿಶ್ವವಿದ್ಯಾನಿಲಯವು ಭೀಮ ಬ್ರಾಂಡ್ ಬೀಜವನ್ನು ತಯಾರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಆ ಬೀಜ ತಯಾರಿಕೆಯನ್ನು ರೈತರ ಜಮೀನಿನಲ್ಲಿ ನಡೆಸಿ ಎಲ್ಲ ರೈತರಿಗೆ ಲಭ್ಯವಾಗುವಂತೆ ಮಾಡಬೇಕು ಎಂದು ಹೇಳಿದರು.

ಈ ಕ್ಷೇತ್ರೋತ್ಸವದಲ್ಲಿ ವಿಜಾಪುರ ಜಿಲ್ಲೆಯ ಇಂಡಿ, ಬಾಗಲಕೋಟ ಜಿಲ್ಲೆಯ ಬೆನ್ನೂರು, ಬೆನಕಟ್ಟಿ, ಹೊಸಕೋಟಿ, ಗಂದಗಲ್ಲ, ಎಳ್ಳಿಗುತ್ತಿ, ಭಗವತಿ, ಬಾವಲತ್ತಿ, ಕಲಾದಗಿ, ಉದಗಟ್ಟಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ತೋಟಗಾರಿಕಾ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ. ವೆಂಕಟೇಶಲು, ಸಂಶೋಧನಾ ನಿರ್ದೇಶಕ ಡಾ. ಫಕ್ರುದ್ದೀನ್, ತೋಟಗಾರಿಕಾ ಮಹಾವಿದ್ಯಾಲಯದ ಡಾ. ಶಾಂತಪ್ಪ ತಿರುಕಣ್ಣವರ್, ವಿಶೇಷ ಅಧಿಕಾರಿ ಡಾ. ರವೀಂದ್ರ ಜಾವಡಗಿ, ಸಹಪ್ರಾಧ್ಯಾಪಕರಾದ ಪಲ್ಲವಿ ಎಚ್.ಎಂ., ಸಹಾಯಕ ಪ್ರಾಧ್ಯಾಪಕರಾದ ಹಾದಿಮನಿ, ವಾಸಿಂ ಎಂ.ಎ., ಡಾ. ರಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು