ಕಲ್ಲುತೂರಾಟ ಘಟನೆ ಮರೆಮಾಚಲು ಶಾಸಕ ಚಂದ್ರು ಲಮಾಣಿ ವಿರುದ್ಧ ಷಡ್ಯಂತ್ರ – ಶ್ರೀರಾಮುಲು ಆರೋಪ

ಬಾಗಲಕೋಟೆ: ಶಿವಾಜಿ ಜಯಂತಿ ವೇಳೆ ನಡೆದ ಕಲ್ಲು ತೂರಾಟ ಘಟನೆ ಮರೆಮಾಚುವ ಉದ್ದೇಶದಿಂದ ಷಡ್ಯಂತ್ರ ರೂಪಿಸಿ ಬಿಜೆಪಿ ಶಾಸಕ ಚಂದ್ರು ಲಮಾಣಿಯವರನ್ನು ಸಿಕ್ಕಿಹಾಕಿಸುವ ಪ್ರಯತ್ನ ನಡೆಯುತ್ತಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆರೋಪಿಸಿದರು.

ಬಿಜೆಪಿ ಶಾಸಕ ಚಂದ್ರು ಲಮಾಣಿಯವರು ಇತ್ತೀಚೆಗೆ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆ ಘಟನೆಯನ್ನು ಜನರಿಂದ ಮರೆಮಾಚಲು ಈ ರೀತಿಯ ಹುನ್ನಾರ ನಡೆಸಲಾಗಿದೆ ಎಂದು ಹೇಳಿದರು.

ಲೋಕಾಯುಕ್ತವನ್ನು ದುರುಪಯೋಗಪಡಿಸಿಕೊಂಡು ಇಂತಹ ಕ್ರಮಕ್ಕೆ ಕೈ ಹಾಕಲಾಗಿದೆ ಎಂದು ಪರೋಕ್ಷವಾಗಿ ರಾಜ್ಯ ಸರ್ಕಾರದ ವಿರುದ್ಧವೂ ಅವರು ಆರೋಪಿಸಿದರು. ಬಾಗಲಕೋಟೆ ಕಲ್ಲುತೂರಾಟ ಪ್ರಕರಣ ಈಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದ್ದು, ಆರೋಪ–ಪ್ರತ್ಯಾರೋಪಗಳು ಮುಂದುವರಿದಿವೆ.

ಕಾಮೆಂಟ್‌ಗಳು