ಬಾಗಲಕೋಟೆ:ದುಬೈ ಏಷ್ಯನ್ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಶ್ರಾವಣಿಗೆ ಚಿನ್ನ

ಬಾಗಲಕೋಟೆ: ದುಬೈನಲ್ಲಿ ನಡೆದ 6ನೇ ಏಷ್ಯನ್ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್–2025 ನಲ್ಲಿ ಕರ್ನಾಟಕದ ಪ್ರತಿಭಾವಂತ ಬಾಲಕಿ ಶ್ರಾವಣಿ ದರೂರ ಚಿನ್ನದ ಪದಕ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾಳೆ.

16 ದೇಶಗಳು ಭಾಗವಹಿಸಿದ್ದ ಈ ಅಂತಾರಾಷ್ಟ್ರೀಯ ಯೋಗ ಕ್ರೀಡಾ ಸ್ಪರ್ಧೆಯನ್ನು ಏಷ್ಯನ್ ಯೋಗಾಸನ ಸ್ಪೋರ್ಟ್ಸ್ ಫೆಡರೇಶನ್ ಸಹಯೋಗದಲ್ಲಿ ಯುಎಇ ಕ್ರೀಡಾ ಸಚಿವಾಲಯ ಆಯೋಜಿಸಿತ್ತು. ಕಠಿಣ ಸ್ಪರ್ಧೆಯಲ್ಲಿ ಶ್ರಾವಣಿ ತನ್ನ ಅದ್ಭುತ ಯೋಗ ಪ್ರದರ್ಶನದ ಮೂಲಕ ಚಿನ್ನದ ಪದಕ ಗೆದ್ದು ಗಮನ ಸೆಳೆದಿದ್ದಾಳೆ.

ಪ್ರಸ್ತುತ ಶ್ರಾವಣಿ ಬೆಂಗಳೂರು ಬನಶಂಕರಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ 5ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ರಾಜರಾಜೇಶ್ವರಿ ನಗರದಲ್ಲಿನ ಆಚಾರ್ಯ ಯೋಗ ಸಂಸ್ಥೆಯಲ್ಲಿ ಯೋಗಾಭ್ಯಾಸ ಮುಂದುವರಿಸುತ್ತಿದ್ದಾಳೆ. ಬಾಲ್ಯದಿಂದಲೇ ಯೋಗದಲ್ಲಿ ಆಸಕ್ತಿ ಹೊಂದಿರುವ ಶ್ರಾವಣಿ ಈಗಾಗಲೇ ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಹಾಗೂ ಅಂತರ ಶಾಲಾ ಮಟ್ಟದ ಯೋಗಾಸನ, ಭಗವದ್ಗೀತೆ ಮತ್ತು ನೃತ್ಯ ಸ್ಪರ್ಧೆಗಳಲ್ಲಿ 50ಕ್ಕೂ ಹೆಚ್ಚು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಜಯಿಸಿದ್ದಾಳೆ.

ಬೆಂಗಳೂರಿನಲ್ಲಿ ವಾಸವಾಗಿರುವ ತಂದೆ ದಿಲೀಪ್ ದರೂರ ಹಾಗೂ ತಾಯಿ ರೋಹಿಣಿ ದರೂರ ಅವರ ಪುತ್ರಿಯಾಗಿರುವ ಶ್ರಾವಣಿ, ಮೂಲತಃ ಬಾಗಲಕೋಟೆಯ ಚವಾಣ್ ಕುಟುಂಬಕ್ಕೆ ಸೇರಿದವಳು. ಶ್ರಾವಣಿಯ ಸಾಧನೆಗೆ ಕುಟುಂಬಸ್ಥರು, ಗುರುಗಳು ಹಾಗೂ ಬಂಧು-ಮಿತ್ರರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

ಕಾಮೆಂಟ್‌ಗಳು