ಬಾಗಲಕೋಟೆ: ಇತ್ತೀಚೆಗೆ ನಗರದಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆ ವೇಳೆ ಸಂಭವಿಸಿದ ಕಲ್ಲುತೂರಾಟ ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೆರವಣಿಗೆ ಸಂದರ್ಭದಲ್ಲಿ ದುರುದ್ದೇಶಪೂರ್ವಕವಾಗಿ ನಡೆದ ಕಲ್ಲು ತೂರಾಟದಲ್ಲಿ ಹಲವರು ಹಿಂದೂ ಕಾರ್ಯಕರ್ತರು ಗಾಯಗೊಂಡಿದ್ದು, ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ ಎಂದು ತಿಳಿಸಿದರು.
ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದ ದುಷ್ಕರ್ಮಿಗಳನ್ನು ಜಾತಿ, ಮತ, ಧರ್ಮ ನೋಡದೆ ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಕಾನೂನು ಕೈಗೆತ್ತಿಕೊಂಡವರು ಯಾರೇ ಆಗಿದ್ದರೂ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.
ಹಿಂದುಗಳು ಸಹನಶೀಲರು, ಅಹಿಂಸಾ ಮಾರ್ಗದಲ್ಲಿ ಮುನ್ನಡೆಯುವವರು. ಅನಗತ್ಯವಾಗಿ ಅವರನ್ನು ಕೆಣಕುವುದು, ಹಲ್ಲೆ ನಡೆಸುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತನಗೌಡ ಪಾಟೀಲ್, ರಾಜ್ಯಸಭಾ ಸದಸ್ಯ ನಾರಾಯಣ ಸಾ ಬಾಂಡೆ ಸೇರಿದಂತೆ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ