ಬಾದಾಮಿ : ಗ್ರಾಮೀಣ ಭಾಗದ ಅಭಿವೃದ್ದಿ ಕಾರ್ಯಗಳಿಗೆ ಅಗತ್ಯವಿರುವ ಸಂಪನ್ಮೂಲ ಸಂಗ್ರಹ ಮಾಡುವ ಉದ್ದೇಶದಿಂದ ಫೆಬ್ರವರಿ ೧೬ ರಂದು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವಿಶೇಷ ಕರ ವಸೂಲಾತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು.
ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಶನಿವಾರ ಜರುಗಿದ ಪಂಚಾಯತ ಅಭಿವೃದ್ದಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಸಕ್ತ ಸಾಲಿನ ಕರ ವಸೂಲಾತಿಯ ಗುರಿಯನ್ನು ನಿಗಧಿತ ಅವಧಿಯೊಳಗೆ ಪ್ರಗತಿ ಸಾಧಿಸಬೇಕಾಗಿದೆ. ಪ್ರಸಕ್ತ ಸಾಲಿನ ಬೇಡಿಕೆಗೆ ಇಲ್ಲಿಯವರೆಗೆ ಶೇ.೭೦.೩೫ ರಷ್ಟು ಮಾತ್ರ ಕರ ವಸೂಲು ಮಾಡಲಾಗಿದೆ. ಕರ ವಸೂಲಾತಿಯಲ್ಲಿ ಶೇ.೧೦೦ ರಷ್ಟು ಪ್ರಗತಿ ಸಾಧಿಸಲು ಇನ್ನು ಎರಡು ತಿಂಗಳು ಮಾತ್ರವಿದ್ದು, ಈ ಹಿನ್ನಲೆಯಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಈ ಕಾರ್ಯಕ್ಕೆ ಸಹಕರಿಸುವಂತೆ ಮನವಿ ಮಾಡಿಕೊಂಡರು.
ಫೆಬ್ರವರಿ ೧೬ ರಂದು ನಡೆಯಲಿರುವ ವಿಶೇಷ ಅಭಿಯಾನದಲ್ಲಿ ಒಟ್ಟು ೫ ಕೋಟಿ ರೂ.ಗಳ ವಸೂಲಾತಿಗೆ ಗುರಿ ನೀಡಲಾಗಿದ್ದು, ಪ್ರತಿಯೊಂದು ತಾಲೂಕಿಗೆ ಗುರಿ ನಿಗದಿ ಮಾಡಲಾಗಿದೆ. ಗುರಿ ಮುಟ್ಟುವ ರೀತಿಯಲ್ಲಿ ಕರ ವಸೂಲಾತಿ ಕಾರ್ಯ ನಡೆಯಬೇಕು. ಇದಕ್ಕಾಗಿ ಬಾಕಿ ಇರುವ ಪಟ್ಟಗಳನ್ನು ಸಿದ್ದಪಡಿಸಿಕೊಳ್ಳುವ ಕೆಲಸ ತುರ್ತಾಗಿ ನಡೆಸಿ ಕರ ವಸೂಲಾತಿಗೆ ಕಾರ್ಯಪ್ರವೃತ್ತರಾಗಬೇಕಿದೆ. ಪ್ರತಿಯೊಂದು ತಾಲೂಕಿಗೆ ಜಿಲ್ಲಾ ಮಟ್ಟದ ಮೂರು ಜನ ಅಧಿಕಾರಿಗಳನ್ನು ಜಿಲ್ಲಾ ಮಟ್ಟದಲ್ಲಿ ನೇಮಿಸಿಕೊಳ್ಳಲಾಗುತ್ತಿದ್ದು, ಹಾಗೂ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಓರ್ವ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಪಟ್ಟಿ ನೀಡಲು ತಿಳಿಸಿದರು.
ಕರ ವಸೂಲಾತಿಯಲ್ಲಿ ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮ ಪಂಚಾಯತಿ ಪ್ರಥಮ ಸ್ಥಾನದಲ್ಲಿದ್ದರೆ, ದ್ವಿತೀಯ ಸ್ಥಾನದಲ್ಲಿ ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮ ಪಂಚಾಯಿತಿ ಇದೆ. ಜಮಖಂಡಿ ತಾಲೂಕಿನ ಮದರಖಂಡಿ ಗ್ರಾಮ ಪಂಚಾಯತಿ ತೃತೀಯ ಸ್ಥಾನದಲ್ಲಿರುವುದಾತಿ ತಿಳಿಸಿದರು. ಉಳಿದ ತಾಲೂಕಿನ ಗ್ರಾಮ ಪಂಚಾಯತಿಗಳು ಕರ ವಸೂಲಾತಿ ಮಾಡುತ್ತಿದ್ದು, ಗುರಿಗೆ ತಕ್ಕಂತೆ ಆಗುತ್ತಿಲ್ಲ. ಆದ್ದರಿಂದ ವಸೂಲಾತಿ ಪ್ರಗತಿಯನ್ನು ಹೆಚ್ಚಿಸುವ ಕೆಲಸವಾಗಬೇಕೆಂದು ಪಿಡಿಓಗಳಿಗೆ ಸೂಚನೆ ನೀಡಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಾಕಿ ವೇತನ ಸಂಪೂರ್ಣವಾಗಿ ಪಾವತಿಯಾಗಬೇಕು. ಗ್ರಂಥಾಲಯ ಸಿಬ್ಬಂದಿಗಳ ವೇತನ ಪಾವತಿ ಸಹ ಬಾಕಿ ಉಳಿದಿದ್ದು, ಪಾವತಿಗೆ ಕ್ರಮವಹಿಸಬೇಕಿದೆ. ೧೫ನೇ ಹಣಕಾಸು ಯೋಜನೆಯ ಅನುದಾನದಡಿ ಬಿಡುಗಡೆಯಾದ ಅನುದಾನ ಸಂಪೂರ್ಣವಾಗಿ ಖರ್ಚು ಆಗಬೇಕು. ಸಿವಿಲ್ ಮತ್ತು ಮೆಟಲ್ ವರ್ಕ ಕಾಮಗಾರಿಗಳ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಬಿಲ್ ಪಾವತಿಗೆ ಕ್ರಮವಹಿಸಬೇಕು. ಮಾರ್ಚ ಕೊನೆಯಲ್ಲಿ ಶೇ.೧೦೦ ರಷ್ಟು ಕೆಲಸ ಮುಗಿಯಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಮುಖ್ಯ ಯೋಜನಾಧಿಕಾರಿ ಅಲ್ಲಮಪ್ರಭು, ಯೋಜನಾ ನಿರ್ದೇಶಕ ಎಸ್.ಎಂ.ಕಾAಬಳೆ ಸೇರಿದಂತೆ ಆಯಾ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಉಪಸ್ಥಿತರಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ