ಬೆಂಗಳೂರು/ಬಾಗಲಕೋಟೆ: ಇಡೀ ಕರ್ನಾಟಕವೇ ಹೆಮ್ಮೆ ಪಡುವಂತಹ ಸಾಧನೆಯನ್ನು ಮೂಲತಃ ಬಾಗಲಕೋಟೆಯವರಾದ ಹಾಗೂ ಬೆಂಗಳೂರಿನ ವಿಜಯನಗರದಲ್ಲಿ ಬೆಳೆದ ರಾಹುಲ್ ಪಾಟೀಲ್ ಮಾಡಿದ್ದಾರೆ. ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ, ವಿಶೇಷವಾಗಿ ಕೃತಕ ಬುದ್ಧಿಮತ್ತೆ (AI) ವಲಯದಲ್ಲಿ ಅವರು ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ್ದು, ಉತ್ತರ ಕರ್ನಾಟಕದ ಪ್ರತಿಭೆಗೆ ಜಾಗತಿಕ ಮನ್ನಣೆ ತಂದುಕೊಟ್ಟಿದ್ದಾರೆ.
ಪ್ರಸ್ತುತ ರಾಹುಲ್ ಪಾಟೀಲ್ ಅವರು ಜಗತ್ತಿನ ಮುಂಚೂಣಿಯ ಎಐ ಸಂಸ್ಥೆಯಾದ ‘ಆಂಥ್ರೋಪಿಕ್’ (Anthropic) ನಲ್ಲಿ ಚೀಫ್ ಟೆಕ್ನಾಲಜಿ ಆಫೀಸರ್ (CTO) ಹಾಗೂ ಚೀಫ್ ಆರ್ಕಿಟೆಕ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಐ ತಂತ್ರಜ್ಞಾನ ಕ್ಷೇತ್ರದಲ್ಲಿ ಈ ಸಂಸ್ಥೆ ಪ್ರಮುಖ ಸ್ಥಾನ ಹೊಂದಿದ್ದು, ಅದರ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾಗಿ ಒಬ್ಬ ಕನ್ನಡಿಗ ಸೇವೆ ಸಲ್ಲಿಸುತ್ತಿರುವುದು ರಾಜ್ಯಕ್ಕೆ ಗರ್ವದ ಸಂಗತಿಯಾಗಿದೆ.
ಬೆಂಗಳೂರು ವಿಜಯನಗರದಲ್ಲಿ ಬೆಳೆದ ರಾಹುಲ್ ಪಾಟೀಲ್ ಇಂದು ಅಮೆರಿಕಾ ಹಾಗೂ ಯುರೋಪ್‌ನ ಪ್ರಮುಖ ತಂತ್ರಜ್ಞರೊಂದಿಗೆ ಕೈಜೋಡಿಸಿ ಎಐ ಸುರಕ್ಷತೆ, ನೀತಿ ರೂಪಣೆ ಹಾಗೂ ಭವಿಷ್ಯದ ತಂತ್ರಜ್ಞಾನ ವಿನ್ಯಾಸದಂತಹ ಪ್ರಮುಖ ವಿಷಯಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಪರಿಶ್ರಮ ಮತ್ತು ಪ್ರತಿಭೆ ಇದ್ದರೆ ಹುಟ್ಟಿದ ಊರು ಅಥವಾ ಹಿನ್ನೆಲೆ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಇವರ ಸಾಧನೆಯೇ ಸಾಕ್ಷಿಯಾಗಿದೆ.
ರಾಹುಲ್ ಅವರ ಯಶೋಗಾಥೆ ಉತ್ತರ ಕರ್ನಾಟಕದ ಯುವಜನತೆಗೆ ಪ್ರೇರಣೆಯಾಗಿದೆ. ಬಾಗಲಕೋಟೆ, ಬೀದರ್, ಕಲಬುರಗಿ, ರಾಯಚೂರು ಸೇರಿದಂತೆ ಯಾವುದೇ ಜಿಲ್ಲೆಯ ಯುವಕರು ದೃಢ ಸಂಕಲ್ಪ ಹಾಗೂ ಪರಿಶ್ರಮದಿಂದ ಜಾಗತಿಕ ವೇದಿಕೆಯಲ್ಲಿ ಗುರುತಿಸಿಕೊಳ್ಳಬಹುದು ಎಂಬ ಸಂದೇಶವನ್ನು ಅವರ ಸಾಧನೆ ನೀಡುತ್ತಿದೆ.
ಉತ್ತರ ಕರ್ನಾಟಕದ ಮಣ್ಣಿನಿಂದಲೂ ಜಾಗತಿಕ ಮಟ್ಟದ ನಾಯಕತ್ವ ಮೂಡಿಬರಬಹುದು ಎಂಬ ಆಶಾಭಾವನೆಗೆ ರಾಹುಲ್ ಪಾಟೀಲ್ ಅವರು ಜೀವಂತ ಉದಾಹರಣೆಯಾಗಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ