ಬಾದಾಮಿ:ಮಾ.18 ರಿಂದ‌ ಎ.2 ರವರೆಗೆ ಎಸ್.ಎಸ್.ಎಲ್.ಸಿ.ಪರೀಕ್ಷೆ-1

ಪಾರದರ್ಶಕ ಪರೀಕ್ಷೆ ನಡೆಸಲು ಕ್ರಮ: ತಹಶೀಲದಾರ ಬೊಮ್ಮನ್ನವರ 

ಬಾದಾಮಿ: ತಾಲೂಕಿನಾದ್ಯಂತ ಮಾ.18 ರಿಂದ ಎ.2 ರ ವರೆಗೆ 2026 ನೇ ಸಾಲಿನ ಎಸ್.ಎಸ್.ಎಲ್.ಸಿ.ವಾರ್ಷಿಕ ಪರೀಕ್ಷೆ ಜರುಗಲಿದ್ದು, ಪರೀಕ್ಷಾ‌ ಸಮಯದಲ್ಲಿ ಯಾವುದೇ ಪ್ರಶ್ನೆ‌ಪತ್ರಿಕೆ ಸೋರಿಕೆಯಾಗದಂತೆ ಅಕ್ರಮ ಗಳಿಗೆ ಅವಕಾಶ ಮಾಡದೇ ಪಾರದರ್ಶಕ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ತಹಶೀಲದಾರ ಎಸ್.ಎಫ್.ಬೊಮ್ಮನ್ನವರ ಸೂಚಿಸಿದರು.

ಅವರು ತಹಶೀಲದಾರ ಕಚೇರಿಯ ಸಭಾಭವನದಲ್ಲಿ ಸೋಮವಾರ ನಡೆದ ಎಸ್.ಎಸ್.ಎಲ್.ಸಿ.ಪರೀಕ್ಷೆ-1 ತಾಲೂಕಾಮಟ್ಟದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಾಗಲಿ, ಅವ್ಯವಹಾರಗಳು ನಡೆಯದಂತೆ ಎಲ್ಲಾ ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ‌ಕಲಂ‌ 144 ಜಾರಿಗೊಳಿಸುವುದರ ಮೂಲಕ ಶಿಸ್ತು ಬದ್ದ ವಾಗಿ ಪರೀಕ್ಷೆ ನಡೆಸಲು ಸೂಚಿಸಿದರು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಆಸನದ ವ್ಯವಸ್ಥೆ ಮಾಡಬೇಕು ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ನಿರಂತರ ವಿದ್ಯುತ್ ಸಂಪರ್ಕ ಒದಗಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. 


ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ವಾಮನ ಪೆಟ್ಲೂರ ಮಾತನಾಡಿ ತಾಲೂಕಿನಲ್ಲಿ ಹದಿನೈದು ಪರೀಕ್ಷಾ ಕೇಂದ್ರಗಳಲ್ಲಿ 5301 ಮಕ್ಕಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ಪರೀಕ್ಷಾ ಕಾರ್ಯಕ್ಕೆ 15 ಜನ ಮುಖ್ಯ ಅಧೀಕ್ಷಕರು, 10 ಜನ ಉಪಮುಖ್ಯ ಅಧೀಕ್ಷಕರು,  10 ಜನ ಪ್ರಶ್ನೆಪತ್ರಿಕೆ ಅಧೀಕ್ಷಕರು, 15 ಜನ ಸ್ಥಾನಿಕ ಜಾಗೃತ ದಳ ಅಧಿಕಾರಿಗಳನ್ನು ನೇಮಿಸಲಾಗಿದೆ. ಐದು‌ ಮಾರ್ಗಾಧಿಕಾರಿಗಳು, 411 ಜನ‌ ಮೇಲ್ವಿಚಾರಕರನ್ನು ಹದಿನೈದು ಜನರನ್ನು ಮೊಬೈಲ್ ಸ್ವಾಧೀನಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.‌ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ನಾಲ್ಕು ಸಂಚಾರ ಜಾಗೃತ ದಳ ರಚನೆ‌ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. 

ಸಭೆಯಲ್ಲಿ ಸಿಪಿಐ ಕರೆಪ್ಪ ಬನ್ನೆ, ಪಿ.ಎಸ್.ಐ.ಹನಮಂತ ನೆರಳೆ,  ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ.ದೊಡ್ಡಪ್ಪನ್ನವರ, ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ಎಚ್.ಹಳಗೇರಿ, ಉಪಪ್ರಾಚಾರ್ಯ ಎಂ.ಪಿ.ಮಾಗಿ, ಮುಖ್ಯಶಿಕ್ಷಕರಾದ ಬಿ.ಎಸ್.ಅಬ್ಬಿಗೇರಿ, ಬಸವರಾಜ ಅಂಗಡಿ, ನೋಡಲ್ ಅಧಿಕಾರಿ ಬಿ.ಕೆ.ಚಿಮಲ್, ಸೇರಿದಂತೆ ಎಲ್ಲಾ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಹಾಜರಿದ್ದರು.

ಕಾಮೆಂಟ್‌ಗಳು