ಬಾಗಲಕೋಟೆ ಉಪಚುನಾವಣೆ ಅಧಿಸೂಚನೆ: ಏಪ್ರಿಲ್ 9ಕ್ಕೆ ಮತದಾನ

ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಭಾರತ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು, ಏಪ್ರಿಲ್ 9 ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.

ಸೋಮವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 16ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಮಾರ್ಚ್ 23 ಕೊನೆಯ ದಿನವಾಗಿದೆ. ಮಾರ್ಚ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಮಾರ್ಚ್ 26 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ 4ರಂದು ಮತ ಎಣಿಕೆ ನಡೆಯಲಿದೆ. ಮಾರ್ಚ್ 15ರಿಂದ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ ಎಂದು ತಿಳಿಸಿದರು.

ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 319 ಮತಗಟ್ಟೆಗಳಿದ್ದು, ಅದರಲ್ಲಿ ಗ್ರಾಮೀಣ ಪ್ರದೇಶದಲ್ಲಿ 176 ಮತ್ತು ನಗರ ಪ್ರದೇಶದಲ್ಲಿ 143 ಮತಗಟ್ಟೆಗಳಿವೆ. ಫೆಬ್ರವರಿ 14ರ ಅಂತಿಮ ಮತದಾರರ ಪಟ್ಟಿಯ ಪ್ರಕಾರ ಕ್ಷೇತ್ರದಲ್ಲಿ ಒಟ್ಟು 2,59,260 ಮತದಾರರಿದ್ದು, 1,26,761 ಪುರುಷರು ಹಾಗೂ 1,32,476 ಮಹಿಳಾ ಮತದಾರರು ಇದ್ದಾರೆ. ಯುವ ಮತದಾರರು 4,188, 85 ವರ್ಷಕ್ಕಿಂತ ಮೇಲ್ಪಟ್ಟವರು 3,017, ಪಿಡಬ್ಲ್ಯೂಡಿ ಮತದಾರರು 2,633, 100 ವರ್ಷಕ್ಕಿಂತ ಮೇಲ್ಪಟ್ಟವರು 38 ಹಾಗೂ 391 ಸೇವಾ ಮತದಾರರು ಇದ್ದಾರೆ ಎಂದು ಹೇಳಿದರು.

ಚುನಾವಣೆ ನಿಯಮ ಪಾಲನೆಗಾಗಿ ಜಿಲ್ಲೆಯಲ್ಲಿ 60 ಫ್ಲೈಯಿಂಗ್ ಸ್ಕ್ವಾಡ್, 72 ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳು, 22 ವಿಡಿಯೋ ಸರ್ವೆಲೆನ್ಸ್ ತಂಡಗಳು ಹಾಗೂ 24 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಅನಧಿಕೃತ ಹಣ ಹಾಗೂ ಸಾಮಗ್ರಿಗಳ ಸಾಗಾಣಿಕೆ ತಡೆಯಲು ವಿವಿಧ ಕ್ಷೇತ್ರಗಳಲ್ಲಿ ಈ ಚೆಕ್‌ಪೋಸ್ಟ್‌ಗಳನ್ನು ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಸಾರ್ವಜನಿಕರು ಸಿವಿಜಿಲ್ (cVIGIL) ಆ್ಯಪ್ ಮೂಲಕ ದೂರು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ ಸಿಇಓ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಹಾಗೂ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಉಪಸ್ಥಿತರಿದ್ದರು.

ಕಾಮೆಂಟ್‌ಗಳು