ಬಾಗಲಕೋಟೆ: ಬಾಗಲಕೋಟೆ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮಾಡುವಲ್ಲಿ ಅನುಕಂಪ ಹಾಗೂ ಜನಪ್ರಿಯತೆ ಸಮೀಕ್ಷೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೇಟಿ ಕುಟುಂಬದೊಳಗಿನ ಪೈಪೋಟಿ ವಿಚಾರಕ್ಕೆ ಸಂಬಂಧಿಸಿ ಜಿಲ್ಲಾಧ್ಯಕ್ಷರು ಮಧ್ಯಸ್ಥಿಕೆ ವಹಿಸಲಿದ್ದು, ಈಗಾಗಲೇ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದರು. ಎಲ್ಲ ವಿಚಾರಗಳನ್ನು ಪರಿಗಣಿಸಿ ಪಕ್ಷದ ಪರವಾಗಿ ಅಭ್ಯರ್ಥಿಗೆ ಟಿಕೆಟ್ ನೀಡಲಾಗುತ್ತದೆ ಎಂದು ತಿಳಿಸಿದರು.
ಬಾಗಲಕೋಟೆಯಲ್ಲಿ ಹಿಂದೂ ಕಾರ್ಯಕರ್ತನ ಬಂಧನದ ವೇಳೆ ನಡೆದ ತಳ್ಳಾಟ–ನೂಕಾಟ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದರು. ಕಾನೂನಿನ ಮುಂದೆ ಹಿಂದೂ–ಮುಸ್ಲಿಂ ಎಂಬ ವ್ಯತ್ಯಾಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಂ ಅವಧಿ ಕುರಿತು ಯಾವುದೇ ಗಡುವು ನಿಗದಿಯಾಗಿಲ್ಲ. ಮೂರು ವರ್ಷ ಅಥವಾ ಎರಡುವರೆ ವರ್ಷ ಎಂಬ ಮಾತು ಯಾರೂ ಹೇಳಿಲ್ಲ. ಈ ಹಿನ್ನೆಲೆ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಸಿಎಂ ಹಾಗೂ ಡಿಸಿಎಂ ವಿರುದ್ಧ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಬೇಕು ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಅದು ವಿರೋಧ ಪಕ್ಷದ ಆಂತರಿಕ ವಿಚಾರವಾಗಿದ್ದು, ಪ್ರತಿಭಟನೆ ನಡೆಸುವ ಅಗತ್ಯವಿಲ್ಲ ಎಂದು ಹೇಳಿದರು.
ಇಕ್ಬಾಲ್ ಹುಸೇನ್ ಅವರ ಹೇಳಿಕೆ ಕುರಿತಂತೆ ಮಾತನಾಡಿದ ಅವರು, ರಾಜ್ಯದಲ್ಲಿ ಏಳು ಕೋಟಿ ಜನಸಂಖ್ಯೆ ಇದ್ದು ಒಬ್ಬರ ಹೇಳಿಕೆಯಿಂದ ಪಕ್ಷದ ನಿರ್ಧಾರವಾಗುವುದಿಲ್ಲ ಎಂದರು.
ಬಾಲಕೃಷ್ಣ ಅವರ ಮನೆಯಲ್ಲಿ ನಡೆದ ಡಿನ್ನರ್ ಸಭೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂಬ ಅಭಿಪ್ರಾಯವನ್ನು ಬಾಲಕೃಷ್ಣ ಅವರು ಮೊದಲಿನಿಂದಲೂ ಬಹಿರಂಗವಾಗಿ ವ್ಯಕ್ತಪಡಿಸುತ್ತಾ ಬಂದಿದ್ದಾರೆ ಎಂದು ಹೇಳಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ