ಮುಧೋಳ : ಕೇಂದ್ರ ಸರ್ಕಾರದ ರೈತಸ್ನೇಹಿ ಪ್ರಧಾನಮಂತ್ರಿ ಫಸಲ ಭಿಮಾ ಯೋಜನೆಯನ್ನು ದುರುಪಯೋಗಪಡಿಸಿಕೊಂಡು ಸರ್ಕಾರಕ್ಕೆ ಮೂವತ್ತು ಕೋಟಿಗೂ ಹೆಚ್ಚು ವಂಚನೆ ಮಾಡಿದ ಆರೋಪದ ಮೇಲೆ ಹನ್ನೊಂದು ಜನರ ವಿರುದ್ದ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೃಷಿ ಇಲಾಖೆಯ ಮುಧೋಳ ತಾಲೂಕು ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ದೊಡಮನಿ ಅವರು ಮಾರ್ಚ್ 10ರಂದು ಮುಧೋಳ ಠಾಣೆಯಲ್ಲಿ ಮೆಟಗುಡ್ಡ ಗ್ರಾಮದ 7ಜನರು ಹಾಗೂ ಯೂನಿವರ್ಸಲ್ ಸೋಂಪು ಇನ್ಸುರೆನ್ಸ್ ಕಂಪನಿಯ ನಾಲ್ವರು ಉದ್ಯೋಗಿಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.
*ಹೇಗೆ ನಡೆಯುತ್ತಿತ್ತು ವಂಚನೆ :* ಪ್ರಧಾನ ಮಂತ್ರಿ ಫಲಭಿಮಾ ಯೋಜನೆಯಡಿ ವಿಮೆ ಅಧಿಸೂಚಿತ ಬೆಳೆಗಳನ್ನು ಬೆಳೆದ ಜನರು ಸರಕಾರ ನಿಗದಿಪಡಿಸಿದ ಪ್ರೀಮಿಯಂನ್ನು ಬ್ಯಾಂಕ್, ಪ್ರಾಥಮಿಕ ಪತ್ತಿನ ಸಹಕಾರಿ ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರ ಹಾಗೂ ಗ್ರಾಮ್ ಒನ್ ಗಳ ಮೂಲಕ ತುಂಬಿ ಸ್ವೀಕೃತಿ ಪಡೆಯುತ್ತಾರೆ. ಈ ಪ್ರೀಮಿಯಂನಡಿ ಜನರ ವಂತಿಕೆ ಬಿಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಪಾಲನ್ನು ಭರಣಾ ಮಾಡುತ್ತವೆ. ಸರ್ಕಾರದ ಮಹತ್ವಾಕಾಂಕ್ಷೆಯನ್ನು ಯೋಜನೆಯನ್ನು ದುರುಪಯೋಗ ಮಾಡಿಕೊಂಡ ಆರೋಪಿತರು ತಮ್ಮ ಜಮೀನುಗಳಲ್ಲಿ ವಿಮೆ ಅಧಿಸೂಚಿತ ಬೆಳೆಯನ್ನು ಬೆಳೆಯದೆ ಹಾಗೂ ಕಡಿಮೆ ಕ್ಷೇತ್ರದಲ್ಲಿ ಅಧಿಸೂಚಿತ ಬೆಳೆ ಬೆಳೆದು ಹೆಚ್ಚು ಕ್ಷೇತ್ರ ದಾಖಲಾತಿಸಿದ್ದಾರೆ. ಆ ಮೂಲಕ ಸರ್ಕಾರಕ್ಕೆ ಕೋಟ್ಯಂತರ ರೂ. ವಂಚಿಸಿದ್ದಾರೆ ಎಂಬುದು ಕಂಡುಬಂದಿದೆ.
*ಆರೋಪಿತರಿಗೆಲ್ಲ ಸಮಾನ ಪಾಲು :* ಹೀಗೆ ಸರ್ಕಾರದಿಂದ ಜಮೆ ಆಗುವ ಹಣದಲ್ಲಿ ಕಂಪನಿಯ ಕೆಲ ಮಧ್ಯವರ್ತಿಗಳು ಹಾಗೂ ಜಮೀನಿನ ಮಾಲೀಕರು ಸಮಾನವಾಗಿ ಹಂಚಿಕೊಂಡು ಸರ್ಕಾರಕ್ಕೆ ವಂಚಿಸಿದ್ದಾರೆ.
*2020-21ರಿಂದ ನಿರಂತರ ವಂಚನೆ* : ಆರೋಪಿತರೆಲ್ಲ ಕಳೆದ ಐದು ವರ್ಷದಿಂದ ಅಂದರೆ 2020-21ರಿಂದ ನಿರಂತರವಾಗಿ ಸರ್ಕಾರಕ್ಕೆ ವಂಚಿಸುತ್ತ ಬಂದಿದ್ದಾರೆ. ಪ್ರಸಕ್ತ ವರ್ಷ 28,51,580 ರೂ. ವಂಚಿಸಿದ್ದು, 2020-21ರಿಂದ ಇಲ್ಲಿಯವರೆಗೆ ಬರೋಬ್ಬರಿ 30,28,51,580 ವಂಚನೆಗೈದಿದ್ದಾರೆ.
*ಯಾರ್ಯಾರ ಮೇಲೆ ದೂರು :* ವಂಚನೆ ಗಮನಕ್ಕೆ ಬರುತ್ತಿದ್ದಂತೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ದೊಡ್ಡಮನಿ ಅವರು ಮೆಟಗುಡ್ಡ ಗ್ರಾಮದ ಕಲ್ಲಪ್ಪ ಹುಣಶಿಕಟ್ಟಿ, ಶ್ರೀನಿವಾಸ ಪಾಟೀಲ, ಕಲ್ಮೇಶ ಜುನ್ನೂರ, ಶ್ರೀನಿವಾಸ ಹುಣಸಿಕಟ್ಟಿ, ರಮೇಶ ಹುಣಶಿಕಟ್ಟಿ, ಪ್ರಶಾಂತ ಕೋಮಾರ, ಶ್ರೀಕಾಂತ ಹಲಗಲಿ ಹಾಗೂ ಯೂನಿವರ್ಸಲ್ ಸೋಂಪು ಇನ್ಸುರೆನ್ಸ್ ಕಂಪನಿಯ ಉದ್ಯೋಗಿಗಳಾದ ಯಶವಂತ, ರಾಕೇಶ, ಪ್ರಕಾಶ ಹಾಗೂ ಅನೀಲ ಎಂಬುವವರ ವಿರುದ್ದ ಪ್ರಕರಣ ದಾಖಲಾಗಿದೆ.
*ಅನಾಮಧೇಯ ಪತ್ರದ ಶಂಕೆ :* ಕೃಷಿ ಇಲಾಖೆ ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ, ವಂಚನೆ ಕುರಿತಾಗಿ ಅನಾಮಧೇಯ ಪತ್ರವೊಂದು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಕೆಯಾಗಿದೆ. ಆ ಪತ್ರದ ಆಧಾರದ ಮೇಲೆ ಜಮಖಂಡಿ ಉಪವಿಭಾಗಾಧಿಕಾರಿಗಳು ಮುಧೋಳ ನಗರದ ಕೃಷಿ ಅಧಿಕಾರಿಗೆ ನಿರ್ದೇಶನ ನೀಡಿರುವ ಹಿನ್ನೆಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ.
**
ಜಮಖಂಡಿ ಉಪವಿಭಾಗಾಧಿಕಾರಿಗಳ ನಿರ್ದೇಶನದ ಮೇರೆಗೆ ಸರ್ಕಾರಕ್ಕೆ ವಂಚಿಸಿರುವವರ ವಿರುದ್ದ ದೂರು ದಾಖಲಿಸಲಾಗಿದೆ.
-ಸಿದ್ದಲಿಂಗೇಶ ದೊಡಮನಿ ಸಹಾಯಕ ಕೃಷಿ ನಿರ್ದೇಶಕರು ಮುಧೋಳ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ