ಬಾಗಲಕೋಟೆ, ಮಾ.13: ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆ ಪ್ರದೇಶಕ್ಕೆ ಸಂಬಂಧಿಸಿದಂತೆ ಉಚಿತ ನಿವೇಶನ ಹಂಚಿಕೆ ವಿಚಾರದಲ್ಲಿ ನಡೆದಿದ್ದ ಅಕ್ರಮದ ಆರೋಪದ ಹಿನ್ನೆಲೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (ಬಿಟಿಡಿಎ) ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ನವನಗರದ ಸಂತೋಷಕುಮಾರ ದೇವೇಂದ್ರಪ್ಪ ಹುಡೇದ ಅವರು ನೀಡಿದ ದೂರಿನನ್ವಯ 2011ರಿಂದ 2017ರ ಅವಧಿಯಲ್ಲಿ ಮನೆ, ಖಾಲಿ ಜಾಗ ಹಾಗೂ ಬಾಡಿಗೆದಾರರಿಗೆ ನೀಡಬೇಕಿದ್ದ ಉಚಿತ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. ಬಾಡಿಗೆದಾರರಲ್ಲದ 17 ಜನರನ್ನು ನಕಲಿ ಬಾಡಿಗೆದಾರರಾಗಿ ತೋರಿಸಿ ಉಚಿತ ನಿವೇಶನಗಳನ್ನು ಹಂಚಿಕೆ ಮಾಡಿ ಹಕ್ಕುಪತ್ರ ನೀಡಿರುವುದರಿಂದ ಸರ್ಕಾರದ ಖಜಾನೆಗೆ ಸುಮಾರು ₹1,44,79,000 ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಈ ಸಂಬಂಧ ಬಾಗಲಕೋಟೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ (20/2026) ದಾಖಲಿಸಲಾಗಿದೆ. ಪ್ರಕರಣದ ತನಿಖೆ ಭಾಗವಾಗಿ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಶೋಧನಾ ವಾರಂಟ್ ಪಡೆದು, ಓರ್ವ ಡಿಎಸ್‌ಪಿ ಹಾಗೂ ಮೂವರು ಪೊಲೀಸ್ ನಿರೀಕ್ಷಕರ ತಂಡ ಬಿಟಿಡಿಎ ಮುಖ್ಯ ಅಭಿಯಂತರರ ಕಚೇರಿ ಮತ್ತು ಪುನರ್ವಸತಿ ಅಧಿಕಾರಿಗಳ ಕಚೇರಿಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತು.
ದಾಳಿಯ ವೇಳೆ ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಬಾಗಲಕೋಟೆ ಹಾಗೂ ವಿಜಯಪುರ ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು ಎಂದು ಕರ್ನಾಟಕ ಲೋಕಾಯುಕ್ತದ ಬಾಗಲಕೋಟೆ ಪೊಲೀಸ್ ಉಪಾಧೀಕ್ಷಕ ಸುರೇಶರೆಡ್ಡಿ ಎಂ.ಎಸ್ ತಿಳಿಸಿದ್ದಾರೆ.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ