ಬಾಗಲಕೋಟೆ ಮೆಡಿಕಲ್ ಕಾಲೇಜು ವಿಚಾರಕ್ಕೆ ಕಾಂಗ್ರೆಸ್ ಕೌಂಟರ್: “ಇದು ಯಾರ ಸಾಧನೆ ಅಲ್ಲ… ಬಡವರ ಕನಸು!”

"ಮೂರು ಅವಧಿ ಇದ್ದು ಸರ್ಕಾರಿ  ಮೆಡಿಕಲ್ ಕಾಲೇಜ್ ಏಕೆ ಮಾಡಲಿಲ್ಲ?” ಮಾಜಿ ಶಾಸಕರಿಗೆ, ರಾಠೋಡ ಪ್ರಶ್ನೆ

By Petkarmedia news Desk|

ಬಾಗಲಕೋಟೆ, ಮಾ.18: ಬಾಗಲಕೋಟೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಕ್ತಾರ ಚಂದ್ರಶೇಖರ ರಾಠೋಡ ಅವರು ಮಾಜಿ ಶಾಸಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆ ಯ ನವನಗರದ ಪತ್ರಿಕಾಭವನದಲ್ಲಿ ನಡೆದಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರವೇ ಜಿಲ್ಲೆಗೆ ಮೆಡಿಕಲ್ ಕಾಲೇಜು ನೀಡುವ ಯೋಜನೆ ಘೋಷಿಸಿತ್ತು. ಆದರೆ 2018ರಲ್ಲಿ ಸರ್ಕಾರ ಬದಲಾದ ನಂತರ ಕಾಮಗಾರಿ ನಿಲ್ಲಿತು. ಈ ಅವಧಿಯಲ್ಲಿ ಕಾಲೇಜು ಸ್ಥಾಪನೆಗಾಗಿ ಹಲವು ಹೋರಾಟಗಳು ನಡೆದವು ಎಂದು ಹೇಳಿದರು.

“ಮೆಡಿಕಲ್ ಕಾಲೇಜು ಯಾವುದೋ ದೊಡ್ಡ ಸಾಧನೆ ಎಂದು ಬಿಂಬಿಸುವುದು ಸರಿಯಲ್ಲ. ಇದು ಬಾಗಲಕೋಟೆಯ ಬಡವರು, ವಿದ್ಯಾರ್ಥಿಗಳು ಹಾಗೂ ಮಧ್ಯಮ ವರ್ಗದ ಜನರ ಕನಸು. ಆ ಕನಸನ್ನು ನನಸು ಮಾಡಲು ದಿವಂಗತ ಮಾಜಿ ಶಾಸಕ ಎಚ್‌.ವೈ. ಮೇಟಿ ಅವರು ನಿರಂತರ ಪ್ರಯತ್ನಿಸಿದ್ದರು,” ಎಂದು ಅವರು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪೂರ ಸೇರಿದಂತೆ ಕಾಂಗ್ರೆಸ್ ನಾಯಕರ ಸತತ ಪ್ರಯತ್ನ ಮತ್ತು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಬದ್ಧತೆಯಿಂದಲೇ ಮೆಡಿಕಲ್ ಕಾಲೇಜು ಸ್ಥಾಪನೆ ಸಾಧ್ಯವಾಯಿತು ಎಂದು ಅವರು ಸ್ಪಷ್ಟಪಡಿಸಿದರು.

ಮಾಜಿ ಶಾಸಕರು ಪತ್ರಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆಗಳನ್ನು ಉಲ್ಲೇಖಿಸಿದ ರಾಠೋಡ, “ಮೂರು ಅವಧಿಗಳವರೆಗೆ ಕ್ಷೇತ್ರವನ್ನು ಪ್ರತಿನಿಧಿಸಿದವರು ಆ ಸಂದರ್ಭದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬಹುದಾಗಿತ್ತು. ಆದರೆ ಯಾಕೆ ಮಾಡಲಿಲ್ಲ ಎನ್ನುವುದು ಜನರಿಗೆ ಗೊತ್ತಿದೆ,” ಎಂದು ಪ್ರಶ್ನಿಸಿದರು.

ಮೆಡಿಕಲ್ ಕಾಲೇಜು ಬಾಗಲಕೋಟೆಗೆ ಬರದಂತೆ ಹಿಂದಿನ ಅವಧಿಯಲ್ಲಿ ಅಡೆತಡೆಗಳು ಉಂಟಾಗಿದ್ದವು ಎಂಬ ಆರೋಪವನ್ನೂ ಅವರು ಮಾಡಿದರು. ಅಗತ್ಯವಿದ್ದರೆ ದಾಖಲೆಗಳೊಂದಿಗೆ ಮಾಧ್ಯಮಗಳ ಮುಂದೆ ಬರಲು ಸಿದ್ಧವಿದ್ದೇವೆ ಎಂದು ಹೇಳಿದರು.

ಆರೋಗ್ಯ ವಿಶ್ವವಿದ್ಯಾಲಯದ ನಿಧಿ ಕುರಿತು ಮಾತನಾಡಿದ ಅವರು, “ಅದು ಸರ್ಕಾರದ ಸಂಸ್ಥೆಯ ಹಣ. ಸರ್ಕಾರದ ಯೋಜನೆಗಳ ಮೂಲಕವೇ ಅದನ್ನು ಬಳಸಿಕೊಳ್ಳಲಾಗುತ್ತದೆ. ಈ ಸರಳ ವಿಷಯವನ್ನೂ ತಿಳಿಯದಿರುವುದು ವಿಷಾದಕರ,” ಎಂದು ಟೀಕಿಸಿದರು.

ಕಾಮೆಂಟ್‌ಗಳು