ಉಪಚುನಾವಣೆಗಳಲ್ಲಿ ಬಿಜೆಪಿ ಗೆಲುವು ಖಚಿತ: ವಿಜಯೇಂದ್ರ ವಿಶ್ವಾಸ
By Petkarmedia news Desk| Bagalkot
ಬಾಗಲಕೋಟೆ: ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಈಗಾಗಲೇ ಘೋಷಣೆಯಾಗಿದ್ದು, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಶ್ರೀನಿವಾಸ್ ದಾಸ್ ಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರಲ್ಲಿ ರಣೋತ್ಸಾಹ ಕಂಡುಬರುತ್ತಿದ್ದು, ಮತ್ತೊಂದೆಡೆ ರಾಜ್ಯ ಸರ್ಕಾರದ ವಿರುದ್ಧ ಮತದಾರರಲ್ಲಿ ಅಸಮಾಧಾನ ಹೆಚ್ಚಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಜನವಿರೋಧಿ, ಬಡವರ ವಿರೋಧಿ ಹಾಗೂ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಯುವಜನತೆಯ ಭವಿಷ್ಯ ಹಾಳಾಗುವಂತೆ ಕ್ರಮಗಳನ್ನು ಕೈಗೊಂಡಿದೆ ಎಂಬ ಆಕ್ರೋಶ ಜನರಲ್ಲಿ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉಪಚುನಾವಣೆಗಳಲ್ಲಿ ಜನರು ಆಡಳಿತ ಪಕ್ಷದ ವಿರುದ್ಧ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಾಗಲಕೋಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಭಾರೀ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಅದೇ ರೀತಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿ ಜಯ ಸಾಧಿಸುವುದು ಖಚಿತ ಎಂದು ಹೇಳಿದರು.
ರಾಜ್ಯ ಸರ್ಕಾರ ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲವಾಗಿದೆ. ಸರ್ಕಾರದ ವಿರುದ್ಧ ಜನರಲ್ಲಿ ಅಸಮಾಧಾನ ಸ್ಪಷ್ಟವಾಗಿದ್ದು, ಪ್ರಜ್ಞಾವಂತ ಮತದಾರರು ಉಪಚುನಾವಣೆಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ