ಮೇಟಿ ಅವರ ನೆನಪಿಗಾಗಿ ಒಗ್ಗಟ್ಟಿನಿಂದ ಗೆಲುವು ಸಾಧಿಸೋಣ”: ಎಸ್.ಜಿ. ನಂಜಯ್ಯನಮಠ
By petkarmedia news Desk|Bagalkot
ಬಾಗಲಕೋಟೆ: ಸೀತಿಮನಿ ಗ್ರಾಮದ ಉಪಚುನಾವಣೆಯ ಹಿನ್ನಲೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರು, ದಿವಂಗತ ಎಚ್.ವೈ . ಮೇಟಿ ಅವರ ನೆನಪಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿ ಉಮೇಶ್ ಮೇಟಿ ಅವರನ್ನು ಗೆಲ್ಲಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಕಳೆದ ಐದು ವರ್ಷಗಳ ಕಾಲ ಎಚ್.ವಿ. ಮೇಟಿ ಅವರು ಕ್ಷೇತ್ರವನ್ನು ಪ್ರತಿನಿಧಿಸಿ ಜನರ ವಿಶ್ವಾಸ ಗಳಿಸಿದ್ದರು. ಆದರೆ ಅವರ ಅಕಾಲಿಕ ನಿಧನದಿಂದ ಇಂದು ಉಪಚುನಾವಣೆಯನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮೇಟಿಅವರು ಸರಳ, ಮಿತಭಾಷಿ ಹಾಗೂ ಎಲ್ಲರೊಂದಿಗೆ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದ ಅಜಾತ ಶತ್ರುವಾಗಿದ್ದರು. “ಬನ್ನಿ, ಕೂತ್ಕೊಳ್ಳಿ, ಚಹಾ ಕುಡಿಯಿರಿ” ಎಂದು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸುವ ಅವರ ಗುಣ ಜನಮನಗಳಲ್ಲಿ ಅಚ್ಚಳಿಯದ ಗುರುತು ಮೂಡಿಸಿದೆ ಎಂದು ಅವರು ಸ್ಮರಿಸಿದರು.
ಈ ಸಂದರ್ಭದಲ್ಲಿ ಮೇಟಿ ಕುಟುಂಬದವರಿಂದ ಉಮೇಶ್ ಮೇಟಿ ಅವರನ್ನು ಅಭ್ಯರ್ಥಿಯಾಗಿ ನಿಲ್ಲಿಸಲಾಗಿದ್ದು, ಪಕ್ಷದ ಹಲವು ನಾಯಕರು ಇದ್ದರೂ ಯಾರೂ ಟಿಕೆಟ್ ಕೇಳದೆ ತ್ಯಾಗದ ಮನೋಭಾವದಿಂದ ಒಗ್ಗಟ್ಟಿನ ನಿರ್ಧಾರ ಕೈಗೊಂಡಿರುವುದು ವಿಶೇಷವಾಗಿತು.
“ನೀವು ಹೇಗೆ ಎಚ್.ವೈ.ಮೇಟಿ ಅವರನ್ನು ಗೆಲ್ಲಿಸುತ್ತಿದ್ದೀರೋ, ಅದೇ ರೀತಿ ಉಮೇಶ್ ಮೇಟಿ ಅವರಿಗೆ ಆಶೀರ್ವಾದ ನೀಡಿ ಗೆಲ್ಲಿಸಬೇಕು” ಎಂದು ಕಾರ್ಯಕರ್ತರು ಹಾಗೂ ಮತದಾರರಿಗೆ ಮನವಿ ಮಾಡಿದರು.
ಇದು ಕೇವಲ ಚುನಾವಣೆ ಅಲ್ಲ, ನಮ್ಮ ನಾಯಕನಿಗೆ ಸಲ್ಲಿಸುವ ಗೌರವವಾಗಿದ್ದು, ಅವರ ಆಶಯಗಳನ್ನು ಮುಂದುವರಿಸಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ನಂಜಯ್ಯನಮಠ ಸಭೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಸವಂತಪ್ಪ ಮೇಟಿ, ಬಲರಾಮ ಪವಾರ್, ಮಲ್ಲಿಕಾರ್ಜುನ ಚರಂತಿಮಠ, ಗುರು ಅನಗವಾಡಿ, ಜಟ್ಟೆಪ್ಪ ಮಾದಾಪೂರ, ಎಸ್.ಎನ್. ರಾಂಪುರ ಹಾಗೂ ಮಹಾದೇವಿ ಮೇಟಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ