ಬಾಗಲಕೋಟೆ: ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಜೀವಂತವಾಗಿಡುವ ಮಹತ್ವದ ಕಾರ್ಯವನ್ನು ಸಾಹಿತ್ಯ ಲೋಕ ಮಾಡುತ್ತಿದೆ ಎಂದು ಹಿರಿಯ ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಹೇಳಿದರು.
ನಗರದ ಬಿಡಿಸಿಸಿ ಬ್ಯಾಂಕಿನ ಸಭಾಭವನದಲ್ಲಿ ಶ್ರೀಮತಿ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನ (ರಿ), ಯಂಡಿಗೇರಿ ವತಿಯಿಂದ ಆಯೋಜಿಸಲಾದ ರಾಜ್ಯಮಟ್ಟದ “ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ–2025” ಹಾಗೂ “ಕು. ಸುಶ್ರಾವ್ಯ ಶೆಲ್ಲಿಕೇರಿ ಶಿಶು ಸಾಹಿತ್ಯ ಪ್ರಶಸ್ತಿ–2025” ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಸಾಹಿತಿಗಳು ಅಳಿದುಹೋಗಬಹುದು, ಆದರೆ ಸಾಹಿತ್ಯ ಕೃತಿಗಳು ಶಾಶ್ವತವಾಗಿರುತ್ತವೆ. ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಜೀವಂತವಾಗಿಡುವ ಶಕ್ತಿ ಸಾಹಿತ್ಯಕ್ಕಿದೆ. ಬಾಗಲಕೋಟೆ ಜಿಲ್ಲೆ ಅನೇಕ ಸಾಹಿತಿಗಳನ್ನು ನಾಡಿಗೆ ನೀಡಿದ್ದು, ಸಾಹಿತ್ಯಾಸಕ್ತರಿಗೆ ಅವಕಾಶಗಳ ಬಾಗಿಲು ತೆರೆದಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಇಂತಹ ಪರಿಸರದಲ್ಲಿ ಸಾಹಿತಿಗಳನ್ನು ಗುರುತಿಸಿ ಉತ್ತಮ ಸಾಹಿತ್ಯಕ್ಕೆ ಪ್ರಶಸ್ತಿ ನೀಡುತ್ತಿರುವ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತೋಟಗಾರಿಕ ವಿಶ್ವವಿದ್ಯಾನಿಲಯದ ಕುಲಪತಿ ಡಾ. ವಿಷ್ಣುವರ್ಧನ, ಸಮಾಜ, ಸಂಸ್ಕೃತಿ ಹಾಗೂ ಪರಂಪರೆಯನ್ನು ಬೆಳೆಸುವಲ್ಲಿ ಸಾಹಿತ್ಯದ ಕೃಷಿ ಅಗತ್ಯವಾಗಿದೆ ಎಂದು ಹೇಳಿದರು. ಕಥೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ “ದೀಡೆಕರೆ ಜಮೀನು” ಕಥಾ ಸಂಕಲನ ಮೂರನೇ ಆವೃತ್ತಿಗೆ ತಲುಪಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ಸಾಹಿತಿ ಡಾ. ಹೇಮಾ ಪಟ್ಟಣಶೆಟ್ಟಿ ಮಾತನಾಡಿ, ಮಹಿಳೆಯರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ ಸಾಹಿತ್ಯ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡುತ್ತಿರುವುದು ಮಾದರಿಯಾಗಿದೆ ಎಂದರು. ಇಂದಿನ ಕಾಲದಲ್ಲಿ ಮಾಹಿತಿ ಸುಲಭವಾಗಿ ಸಿಗುತ್ತಿದೆಯಾದರೂ ಬದುಕಿನ ಜ್ಞಾನ ಕಡಿಮೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಪರಿಣಾಮದಿಂದ ಕನ್ನಡ ಬರವಣಿಗೆ ಕುಂಠಿತವಾಗುತ್ತಿರುವುದು ದುಃಖದ ಸಂಗತಿ. ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಸಾಹಿತ್ಯ ಮಹತ್ವದ ಪಾತ್ರ ವಹಿಸಬೇಕು ಎಂದು ಅವರು ಹೇಳಿದರು.
ಪ್ರಶಸ್ತಿ ಪ್ರದಾನ
2025ನೇ ಸಾಲಿನ ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿಗೆ
ಪ್ರಮೋದ ಮರವಂತೆ – ತೊಂಡೆ ಚಪ್ಪರ (ಕಾದಂಬರಿ)
ಸಿದ್ದು ಸತ್ಯಣ್ಣವರ – ಒಂದು ತೇಗದ ಕುರ್ಚಿ (ಕಥಾ ಸಂಕಲನ)
ಶೋಭಾ ನಾಯಕ – ಅರ್ಧ ಮುಖಗಳ ಶಹರ (ಕವನ ಸಂಕಲನ)
ಆಯ್ಕೆಯಾಗಿದ್ದು,
ಸುಶ್ರಾವ್ಯ ಶೆಲ್ಲಿಕೇರಿ ಶಿಶು ಸಾಹಿತ್ಯ ಪ್ರಶಸ್ತಿ–2025ಗೆ
ಗುಂಡುರಾವ್ ದೇಸಾಯಿ – ಚಾರ್ಲಿ ಚಾರ್ಲಿ ವೇರ್ ಆರ್ ಯು (ಮಕ್ಕಳ ಕಥೆಗಳು)
ಕೃತಿಗಳು ಆಯ್ಕೆಯಾಗಿವೆ. ಪ್ರಶಸ್ತಿ ಪುರಸ್ಕೃತರಿಗೆ ತಲಾ ₹10 ಸಾವಿರ ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಸಾಹಿತ್ಯ ಸ್ಪರ್ಧೆಯ ತೀರ್ಪುಗಾರರಾದ ಸಾಹಿತಿ ಕನ್ನಡಿಗ ನಾರಾಯಣ ಹಾಗೂ ರಾಜಶೇಖರ ಕುಕ್ಕುಂದ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಮಲ್ಲಿಕಾರ್ಜುನ ಶೆಲ್ಲಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಸಾಹಿತ್ಯ ಕ್ಷೇತ್ರದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದಾಗಿ ಹೇಳಿದರು. ಪ್ರತಿಷ್ಠಾನದ ಕಾರ್ಯದರ್ಶಿ ಶಿವಾನಂದ ಶೆಲ್ಲಿಕೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಗಮೇಶ ಪಾನಶೆಟ್ಟಿ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಡಾ. ಚಂದ್ರಶೇಖರ ಕಾಳನ್ನವರ ಸ್ವಾಗತಿಸಿದರು. ಮಹಾಂತೇಶ ಹೊದ್ಲೂರ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಗುರು ಗಾಣಿಗೇರ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಸಾಹಿತಿಗಳು, ಕಲಾವಿದರು, ಯಂಡಿಗೇರಿ ಗ್ರಾಮದ ಹಿರಿಯರು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.:
“ಸಾಮಾಜಿಕ ಜಾಲತಾಣಗಳಿಂದ ಕನ್ನಡ ಬರವಣಿಗೆ ಕುಂಠಿತವಾಗುತ್ತಿದೆ” – ಡಾ. ಹೇಮಾ ಪಟ್ಟಣಶೆಟ್ಟಿ
“ಸಾಹಿತ್ಯಾಸಕ್ತರಿಗೆ ಭಾಗ್ಯದ ಬಾಗಿಲು ತೆರೆದು ಕೊಡುತ್ತಿರುವುದು ಬಾಗಲಕೋಟೆ” – ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ