ಬಾಗಲಕೋಟೆ ಕಣ ರಂಗೇರುತ್ತಿದೆ: ಚರಂತಿಮಠ ಪ್ರಚಾರ ಜೋರಾಗಿ ಆರಂಭ

ಬಿಜೆಪಿ ಅಭ್ಯರ್ಥಿ ಚರಂತಿಮಠ ಆಕ್ರಮಣಕಾರಿ ಕ್ಯಾಂಪೇನ್, ಕಾಂಗ್ರೆಸ್ ವಿರುದ್ಧ ವಾಗ್ದಾಳಿ|ಸಿಎಂ ಪ್ರಚಾರಕ್ಕೂ ಪರಿಣಾಮ ಇಲ್ಲ: ಬಾಗಲಕೋಟೆಯಲ್ಲಿ ಚರಂತಿಮಠ ವಿಶ್ವಾಸದ ಮಾತು

By Petkarmedia news Desk| Bagalkot

ಬಾಗಲಕೋಟೆ: ಉಪಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ನಾಮಪತ್ರ ಸಲ್ಲಿಕೆ ಮಾಡಿದ ಬೆನ್ನಲ್ಲೇ ಪ್ರಚಾರ ಕಾರ್ಯವನ್ನು ಚುರುಕುಗೊಳಿಸಿದರು.

ಬೆಳ್ಳಂಬೆಳಿಗ್ಗೆ ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದ ಅವರು, ನಗರದ ವಿವಿಧ ಪ್ರದೇಶಗಳಲ್ಲಿ ಕಾಲ್ನಡಿಗೆಯಲ್ಲೇ ಪ್ರಚಾರ ನಡೆಸಿದರು. ಮೋಟಗಿ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು. ಬಳಿಕ ಕೌಲಪೇಟೆ, ದೊಡ್ಡಸಾಬಣ್ಣ ಓಣಿ, ಮಡು ಹಾಗೂ ಹಳೆಪೇಟೆ ಪ್ರದೇಶಗಳಲ್ಲಿ ಮತದಾರರನ್ನು ಸಂಪರ್ಕಿಸಿದರು.

ಈ ವೇಳೆ ಮಾತನಾಡಿದ ಚರಂತಿಮಠ, “ಜನರ ಪ್ರತಿಕ್ರಿಯೆ ಗಮನಿಸಿದರೆ ಬಿಜೆಪಿ ಪರ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಜನ ಬೇಸತ್ತಿದ್ದಾರೆ. ಅನುಕಂಪದ ರಾಜಕೀಯ ಕೆಲವೊಂದು ಮಟ್ಟದವರೆಗೆ ಮಾತ್ರ ಪರಿಣಾಮ ಬೀರುತ್ತದೆ, ಅದರಿಂದ ಗೆಲುವು ಸಾಧ್ಯವಿಲ್ಲ” ಎಂದು ಹೇಳಿದರು.

ಮುಖ್ಯಮಂತ್ರಿ ಬಾಗಲಕೋಟೆಯಲ್ಲಿ ಪ್ರಚಾರ ನಡೆಸುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಮುಖ್ಯಮಂತ್ರಿ ಬಂದರೂ ಮತದಾರರು ತಮ್ಮದೇ ನಿರ್ಧಾರ ಕೈಗೊಳ್ಳುತ್ತಾರೆ. ಅದರಿಂದ ಯಾವುದೇ ವಿಶೇಷ ವ್ಯತ್ಯಾಸ ಆಗುವುದಿಲ್ಲ” ಎಂದರು.

ಪ್ರಚಾರಕ್ಕೆ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

ಹಿಂದುತ್ವದ ವಿಚಾರವಾಗಿ ಕೇಳಿದ ಪ್ರಶ್ನೆಗೆ, “ನಾವು ಯಾರನ್ನೂ ಹಿಂದೂ ಅಲ್ಲ ಎಂದು ಹೇಳಿಲ್ಲ. ನಮ್ಮ ಗೆಲುವು ಹಿಂದುತ್ವದ ಗೆಲುವು ಎಂದು ಹೇಳಿದ್ದೇವೆ” ಎಂದು ಸ್ಪಷ್ಟಪಡಿಸಿದರು.

ಕಾಮೆಂಟ್‌ಗಳು