ಪತ್ರಕರ್ತರು ಸಂವಿಧಾನದ ಆಶಯ ಪಾಲಿಸಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ
By PetkarMedia news desk| Bagalkot
ಬೀದರ್: ಪತ್ರಕರ್ತರು ತಮ್ಮ ಕೆಲಸದ ಬಗ್ಗೆ ಆತ್ಮಪರಿಶೀಲನೆ ಮಾಡಿಕೊಳ್ಳಬೇಕು ಹಾಗೂ ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವಲ್ಲಿ ತಮ್ಮ ಪಾತ್ರವನ್ನು ಪ್ರಶ್ನಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬೀದರ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಊಹಾ ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿಯಾಗಿದೆ ಎಂದು ಎಚ್ಚರಿಸಿದರು. ಕ್ಷುಲ್ಲಕ ವಿಚಾರಗಳನ್ನು ದಿನವಿಡೀ ಪ್ರಸಾರ ಮಾಡುವ ಬದಲು ಅದರ ಸಾಮಾಜಿಕ ಪರಿಣಾಮಗಳನ್ನೂ ಯೋಚಿಸಬೇಕು ಎಂದರು.
ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ಪತ್ರಕರ್ತರಾಗಿ ಧ್ವನಿ ಇಲ್ಲದವರ ಧ್ವನಿಯಾಗಿದ್ದರು ಎಂದು ಹೇಳಿದ ಅವರು, ಸಮಾಜದಲ್ಲಿನ ಅಸಮಾನತೆಗಳನ್ನು ಹೋಗಲಾಡಿಸುವ ದಿಸೆಯಲ್ಲಿ ಪತ್ರಕರ್ತರು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಬಸವಾದಿ ಶರಣರ ಆಶಯದ ಸಮಸಮಾಜ ನಿರ್ಮಾಣವಾಗದಿದ್ದರೆ ಅಸಮಾನತೆ ಮುಂದುವರೆಯುತ್ತದೆ ಎಂದರು.
ಯಾರೂ ಕೂಡ ಜನರನ್ನು ಅವಿದ್ಯಾವಂತರಾಗಲಿ ಅಥವಾ ಕೆಳ ಜಾತಿಯಲ್ಲಿ ಹುಟ್ಟಲಿ ಎಂದು ಬಯಸುವುದಿಲ್ಲ. ಈ ಅರಿವನ್ನು ಸಮಾಜದಲ್ಲಿ ಮೂಡಿಸುವ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದು ಅವರು ಹೇಳಿದರು. ಪತ್ರಕರ್ತರು ಕೇವಲ ಮಾಹಿತಿ ನೀಡುವವರಾಗದೇ ಸಮಾಜ ಸುಧಾರಣೆಯಲ್ಲಿಯೂ ಪಾತ್ರವಹಿಸಬೇಕು ಎಂದರು.
ಅಂಬೇಡ್ಕರ್ ಅವರ ಆಶಯದಂತೆ ಆರ್ಥಿಕ ಮತ್ತು ಸಾಮಾಜಿಕ ಶಕ್ತಿಕರಣಕ್ಕೆ ಸರ್ಕಾರ ಬದ್ಧವಾಗಿದೆ. ಬಡವರ ಪರವಾದ ಯೂನಿವರ್ಸಲ್ ಬೇಸಿಕ್ ಇನ್ ಕಂ ಆರ್ಥಿಕತೆಯನ್ನೂ ಮುಂದುವರಿಸುತ್ತಿದ್ದೇವೆ ಎಂದು ಹೇಳಿದರು.
ಇಂದು ಬಹುತೇಕ ಮಾಧ್ಯಮ ಸಂಸ್ಥೆಗಳು ಕಾರ್ಪೋರೇಟ್ ಹಿಡಿತಕ್ಕೆ ಒಳಗಾಗಿವೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಪತ್ರಕರ್ತರು ಸತ್ಯ ಬರೆಯುತ್ತಿದ್ದರೂ ಕೆಲವೊಮ್ಮೆ ಒತ್ತಡಕ್ಕೆ ಮಣಿದು ಬದಲಾವಣೆಗೊಳ್ಳುತ್ತಿದೆ ಎಂದರು. ತಾವು ಯಾವುದೇ ಸಮಯದಲ್ಲೂ ಸರ್ಕಾರದ ಪರವಾಗಿ ಬರೆಯಿರಿ ಎಂದು ಯಾರನ್ನೂ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಜನರು ಇನ್ನೂ ಮಾಧ್ಯಮಗಳ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದು ಹೇಳಿದ ಮುಖ್ಯಮಂತ್ರಿ, ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯ ನೀಡಿರುವುದನ್ನು ಉಲ್ಲೇಖಿಸಿದರು. ಅದರ ನಿಯಮಗಳಲ್ಲಿ ಸಮಸ್ಯೆಗಳಿದ್ದರೆ ಚರ್ಚಿಸಿ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ