ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐದು ದಿನಗಳ ಬೇಸಿಗೆ ಶಿಬಿರ ಉದ್ಘಾಟನೆ
By PetkarMedia news desk: Bagalkot
ಬಾಗಲಕೋಟೆ: ಸೇವಾ ಮನೋಭಾವವನ್ನು ಬೆಳೆಸಿಕೊಂಡರೆ ವ್ಯಕ್ತಿತ್ವವೂ ಉನ್ನತವಾಗುತ್ತದೆ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ಬಾಗಲಕೋಟೆ ಜಿಲ್ಲಾ ಕಾರ್ಯದರ್ಶಿ ಎಸ್.ಎಸ್. ದಳವಾಯಿ ಹೇಳಿದರು.
ನಗರದ ಬಿ.ವಿ.ವಿ. ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯ್.ಕ್ಯೂ.ಎ.ಸಿ ಅಡಿಯಲ್ಲಿ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್, ಭಗತ್ ಸಿಂಗ್ ಹಾಗೂ ರಾಣಿ ಚೆನ್ನಮ್ಮ ರೇಂಜರ್ಸ್ ಘಟಕಗಳ ಸಹಯೋಗದಲ್ಲಿ 2025-26ನೇ ಸಾಲಿನ ಐದು ದಿನಗಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಯುವ ಆಪತ್ ಮಿತ್ರ ತರಬೇತಿ ಪಡೆದಿರುವ ವಿದ್ಯಾರ್ಥಿಗಳು ತಮ್ಮ ಜೀವನದ ಜೊತೆಗೆ ಇತರರ ಜೀವ ರಕ್ಷಣೆ ಮಾಡುವಲ್ಲಿ ಪ್ರಥಮ ಚಿಕಿತ್ಸೆ ಮೂಲಕ ಮಹತ್ವದ ಪಾತ್ರವಹಿಸಬಹುದು ಎಂದು ಹೇಳಿದರು.
ಜಿಲ್ಲಾ ಸಂಘಟಿಕರಾದ ಪ್ರಮೋದ್ ಚೌಗುಲೆ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತುಬದ್ಧ ಜೀವನ ರೂಪಿಸಿಕೊಳ್ಳಲು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಮುಖ ಪಾತ್ರವಹಿಸುತ್ತದೆ. ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿಯೂ ಇದು ಸಹಕಾರಿಯಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಸಂಘಟನಾ ಶಿಕ್ಷಕ ನಾರಾಯಣ ಯಳ್ಳಿಗುತ್ತಿ ಅವರು, ಸಂಸ್ಥಾಪಕ ಲಾರ್ಡ್ ಬೆಡನ್ ಪಾವೆಲ್ ಅವರ ಮಾರ್ಗದರ್ಶಕ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಭವಿಷ್ಯ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಜಗನ್ನಾಥ ವಿ. ಚವ್ಹಾಣ ಅವರು ಮಾತನಾಡಿ, ಪಠ್ಯೇತರ ಚಟುವಟಿಕೆಗಳಾದ ಇಂತಹ ಶಿಬಿರಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಹಕಾರ ಮತ್ತು ಸಹಬಾಳ್ವೆ ಗುಣಗಳು ಬೆಳೆಯುತ್ತವೆ ಎಂದರು.
ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕಿ ಶ್ರೀಮತಿ ಜಿ.ಎಂ. ನಾವದಗಿ, ರೇಂಜರ್ ಘಟಕದ ಮುಖ್ಯಸ್ಥೆ ಡಾ. ಐ.ಕೆ. ಮಠದ, ಸೀನಿಯರ್ ರೇಂಜರ್ ತೇಜಸ್ವಿನಿ, ಮನೋಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮೀನಾಕ್ಷಿ ನಿರೂಪಿಸಿದರು. ವಿವೇಕಾನಂದ ಮತ್ತು ಸಿದ್ದು ಅತಿಥಿಗಳನ್ನು ಪರಿಚಯಿಸಿದರು. ಶಶಿಕುಮಾರ ವಂದಿಸಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ