ಉಮೇಶ್ ಮೇಟಿ ಗೆಲುವು ಖಚಿತ: ಯತೀಂದ್ರ ಸಿದ್ದರಾಮಯ್ಯ*

ಉಮೇಶ್ ಮೇಟಿ ಗೆಲುವು ಖಚಿತ: ಯತೀಂದ್ರ ಸಿದ್ದರಾಮಯ್ಯ

By PetkarMedia news desk: Bagalkot

ಬಾಗಲಕೋಟೆ: ವಿಧಾನಸಭಾ ಉಪಚುನಾವಣೆಯ ಹಿನ್ನಲೆಯಲ್ಲಿ ದೇವಲಾಪುರ, ಚಿಟಗಿನಕೊಪ್ಪ, ಮುದುವಿನಕೊಪ್ಪ, ನಾಗರಾಳ ಹಾಗೂ ಹೊಸೂರು ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರವಾಗಿ ಯತೀಂದ್ರ ಸಿದ್ದರಾಮಯ್ಯ  ಪ್ರಚಾರ ನಡೆಸಿದರು. ವಿವಿಧ ಗ್ರಾಮಗಳಲ್ಲಿ ನಡೆದ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮತದಾರರನ್ನು ಭೇಟಿಯಾಗಿ ಬೆಂಬಲ ಕೋರಿದರು.

ಸಭೆಗಳನ್ನುದ್ದೇಶಿಸಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ ಅವರು, ದಿವಂಗತ ಎಚ್‌. ವೈ. ಮೇಟಿ ಅವರು ಜನಪರ, ಸರಳ ಹಾಗೂ ನಿಷ್ಠಾವಂತ ನಾಯಕರು ಎಂದು ಸ್ಮರಿಸಿದರು. “ಮೇಟಿ ಅವರು ಯಾವತ್ತೂ ಜಾತಿ, ಧರ್ಮ, ಪಂಥ ಭೇದವಿಲ್ಲದೆ ಎಲ್ಲರನ್ನು ಸಮಾನವಾಗಿ ಕಂಡು ಸೇವೆ ಸಲ್ಲಿಸಿದ ಅಪರೂಪದ ನಾಯಕರು. ಶ್ರೀಮಂತರಾಗಲಿ, ಬಡವರಾಗಲಿ, ಕಾರ್ಯಕರ್ತರಾಗಲಿ ಅಥವಾ ಮುಖಂಡರಾಗಲಿ ಎಲ್ಲರಿಗೂ ಸಮಾನ ಗೌರವ ನೀಡಿದವರು”.

ಮೇಟಿ ಅವರು ಸಿದ್ದರಾಮಯ್ಯ ಅವರೊಂದಿಗೆ ದಶಕಗಳ ಕಾಲ ರಾಜಕೀಯವಾಗಿ ನಂಟು ಹೊಂದಿದ್ದು, ಅಧಿಕಾರದಲ್ಲಿರಲಿ ಅಥವಾ ಹೊರಗಿರಲಿ ಎಂದಿಗೂ ಅವರ ಜೊತೆ ನಿಂತು ನಿಷ್ಠೆ ತೋರಿದ ನಾಯಕರು.ಇಂತಹ ನಿಷ್ಠಾವಂತ ನಾಯಕರು ಇಂದಿನ ರಾಜಕೀಯದಲ್ಲಿ ಅಪರೂಪ. ಅವರ ಅಗಲಿಕೆ ಕ್ಷೇತ್ರಕ್ಕೆ ಮಾತ್ರವಲ್ಲ, ರಾಜ್ಯ ರಾಜಕೀಯಕ್ಕೂ ದೊಡ್ಡ ನಷ್ಟವಾಗಿದೆ.

ಈ ಹಿನ್ನೆಲೆಯಲ್ಲಿ ಮೇಟಿ ಅವರ ಸೇವೆಗೆ ನಿಜವಾದ ಗೌರವ ಸಲ್ಲಿಸಬೇಕಾದರೆ ಅವರ ಪುತ್ರ ಉಮೇಶ್ ಮೇಟಿ ಅವರನ್ನು ಗೆಲ್ಲಿಸುವುದು ಅಗತ್ಯ ಎಂದು  ಮನವಿ ಮಾಡಿದರು. ಉಮೇಶ್ ಮೇಟಿ ಅವರು ಕೂಡ ತಂದೆಯವರ ಮಾರ್ಗದಲ್ಲೇ ನಡೆದು ಜನರೊಂದಿಗೆ ಬೆರೆತು ಕೆಲಸ ಮಾಡುವ ನಾಯಕರು. ಅವರನ್ನು ಗೆಲ್ಲಿಸುವುದು ಸಿದ್ದರಾಮಯ್ಯ ಅವರ ಮೇಲಿನ ವಿಶ್ವಾಸವನ್ನು ಬಲಪಡಿಸುವಂತಾಗುತ್ತದೆ.

ಈ ವೇಳೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು  ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳು ಬಡಜನರ ಜೀವನದಲ್ಲಿ ಮಹತ್ವದ ಬದಲಾವಣೆ ತಂದಿದೆ. “ಈ ಯೋಜನೆಗಳು ಕೇವಲ ಭರವಸೆಗಳಲ್ಲ, ನೇರವಾಗಿ ಜನರ ಮನೆಗಳಿಗೆ ತಲುಪಿರುವ ಸಹಾಯವಾಗಿದೆ. ಮಹಿಳೆಯರಿಗೆ ಆರ್ಥಿಕ ಭದ್ರತೆ, ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುತ್ ಹಾಗೂ ಆಹಾರ ಭದ್ರತೆ ಒದಗಿಸುವ ಮೂಲಕ ಸರ್ಕಾರ ಬಡವರ ಜೀವನ ಸುಧಾರಣೆಗೆ ಕೆಲಸ ಮಾಡುತ್ತಿದೆ.

“ಬಿಜೆಪಿ ಸರ್ಕಾರ ಶ್ರೀಮಂತರಿಗೆ ಲಕ್ಷ ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡುತ್ತಿದೆ. ಆದರೆ ರೈತರ ಸಾಲ ಮನ್ನಾ ಮಾಡುವಲ್ಲಿ ವಿಫಲವಾಗಿದೆ. ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ತೆರಿಗೆ ರಿಯಾಯಿತಿ ನೀಡಲಾಗುತ್ತಿದೆ, ಆದರೆ ಸಾಮಾನ್ಯ ಜನರ ಮೇಲೆ ತೆರಿಗೆ ಭಾರ ಹೆಚ್ಚುತ್ತಿದೆ.ಬಡವರ ಪರವಾದ ನೀತಿಗಳಿಗಿಂತ ಶ್ರೀಮಂತರ ಪರವಾದ ನಿರ್ಧಾರಗಳೇ ಹೆಚ್ಚು ಕಾಣಿಸುತ್ತಿವೆ. ಕಾಂಗ್ರೆಸ್ ಮಾತ್ರ ಬಡವರ ಬದುಕು ಸುಧಾರಿಸಲು ನೇರ ಯೋಜನೆಗಳನ್ನು ಜಾರಿಗೆ ತಂದಿದೆ ಅಭಿಪ್ರಾಯಪಟ್ಟರು.

ಅಂತಿಮವಾಗಿ, “ನೀವು ಹೇಗೆ ಎಚ್‌. ವೈ. ಮೇಟಿ ಅವರನ್ನು ಪ್ರೀತಿಸಿ ಬೆಂಬಲಿಸಿದ್ದೀರೋ, ಅದೇ ರೀತಿ ಉಮೇಶ್ ಮೇಟಿ ಅವರಿಗೆ ಮತ ನೀಡಿ ಭರ್ಜರಿ ಗೆಲುವು ತಂದುಕೊಡಿ. ಇದು ಕೇವಲ ಚುನಾವಣೆ ಅಲ್ಲ, ನಮ್ಮ ನಾಯಕನಿಗೆ ಸಲ್ಲಿಸುವ ಗೌರವ” ಎಂದು ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದರು.

ಈ ಸಂದರ್ಭದಲ್ಲಿ  ಬಸವಂತಪ್ಪ ಮೇಟಿ,  ಬಲರಾಮ ಪವಾರ್, ರುಕ್ಮಿಣಿ ಮೇಟಿ, ಸಿದ್ದಣ್ಣ ಮೇಟಿ, ಉಪಸ್ಥಿತರಿದ್ದರು.

ಕಾಮೆಂಟ್‌ಗಳು