ಕೂಡಲಸಂಗಮ ದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮೇಲೆ ಗಂಭೀರ ಆರೋಪ
By PetkarMedia news Desk: Bagalkot
ಬಾಗಲಕೋಟೆ: ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿರುವುದು ರಾಜ್ಯ ರಾಜಕೀಯ ಹಾಗೂ ಧಾರ್ಮಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರಿನಲ್ಲಿ ಮಹಿಳಾ ಆಯೋಗಕ್ಕೆ ನೊಂದ ಮಹಿಳೆಯೊಬ್ಬರು ದೂರು ನೀಡಿರುವ ಹಿನ್ನೆಲೆಯಲ್ಲಿ ಪ್ರಕರಣ ಗಂಭೀರತೆ ಪಡೆದುಕೊಂಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಸ್ವಾಮೀಜಿಯವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಾಗಲಕೋಟೆಯ ನವನಗರದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ನಡೆದ ಪಂಚಮಸಾಲಿ ಸಭೆಯ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಅವರು, “ಕೂಡಲಸಂಗಮ ಎಂಬ ಪವಿತ್ರ ಕ್ಷೇತ್ರವನ್ನು ಅಪವಿತ್ರಗೊಳಿಸಲಾಗಿದೆ” ಎಂದು ಕಿಡಿಕಾರಿದರು.
ಸ್ವಾಮೀಜಿಯವರು ಹಲವಾರು ಅಕ್ರಮಗಳಲ್ಲಿ ತೊಡಗಿಕೊಂಡಿದ್ದಾರೆ ಎಂಬ ಆರೋಪ ಮಾಡಿರುವ ಕಾಶಪ್ಪನವರ, ನಿವೇಶನ ಹಾಗೂ ಜಮೀನುಗಳನ್ನು ಸಹ ಅಕ್ರಮವಾಗಿ ಪಡೆದಿದ್ದಾರೆ ಎಂದು ದೂರಿದರು. ಈ ಎಲ್ಲ ಮಾಹಿತಿಗಳು ಪೀಠದ ಬಳಿ ಇದ್ದದ್ದರಿಂದಲೇ ಅವರನ್ನು ಈಗಾಗಲೇ ಪೀಠದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಪಂಚಮಸಾಲಿ ಪೀಠದ ಬಾಯಲಾದಲ್ಲಿಯೇ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದರೆ ಉಚ್ಚಾಟನೆ ಮಾಡುವ ನಿಯಮವಿದೆ ಎಂದು ಹೇಳಿದ ಅವರು, ಅದನ್ನೇ ಆಧಾರವಾಗಿ ತೆಗೆದುಕೊಂಡು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ, ಸ್ವಾಮೀಜಿಗೆ ಬೇರೆ ಪೀಠ ಸ್ಥಾಪಿಸುವ ಬಗ್ಗೆ ಹೇಳಿಕೆ ನೀಡಿದ್ದ ಬಸನಗೌಡ ಪಾಟೀಲ ಯತ್ನಾಳ್, ಸಿ.ಸಿ. ಪಾಟೀಲ ಹಾಗೂ ಅರವಿಂದ ಬೆಲ್ಲದ ಅವರು ಈಗ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಬೇಕು ಎಂದು ಟಾಂಗ್ ನೀಡಿದರು.
👉 ಪ್ರಕರಣದ ಮುಂದಿನ ಬೆಳವಣಿಗೆಗಳತ್ತ ಎಲ್ಲರ ಕಣ್ಣು ನೆಟ್ಟಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ