ಎಚ್. ವೈ. ಮೇಟಿ ಅಭಿವೃದ್ಧಿ, ಪಂಚ ಗ್ಯಾರಂಟಿಗಳು ಕಾಂಗ್ರೆಸ್‌ಗೆ ಬಲ
By PetkarMedia news desk | Bagalkot
ಬಾಗಲಕೋಟೆ : ಉಪಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಮತದಾರರ ಪಟ್ಟಿಯಲ್ಲಿ ಸಾವಿರಾರು ಜನರ ಹೆಸರುಗಳನ್ನು ಅಕ್ರಮವಾಗಿ ಸೇರ್ಪಡೆ ಮಾಡಿಲಾಗಿದ್ದು, ಈ ಬಗ್ಗೆ ಈಗಾಗಲೇ ರಾಜ್ಯ ಮತ್ತು ಜಿಲ್ಲಾ ಚುನಾವಣೆ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಬಿಜೆಪಿ ವಾಮಮಾರ್ಗದ ಮೂಲಕ ಅನೇಕ ಷಡ್ಯಂತ್ರ ರಚಿಸಿದರೂ ಸಹ ಕೊನೆಗೆ ಕಾಂಗ್ರೆಸ್ ಪಕ್ಷದ ಗೆಲುವು ಗ್ಯಾರಂಟಿ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದರು.
ಇಂದು ಗುರುವಾರ ಬಾಗಲಕೋಟೆಯಲ್ಲಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ದಿ. ಎಚ್. ವೈ. ಮೇಟಿ ಅವರ ಅಭಿವೃದ್ಧಿ ಕಾರ್ಯ, ಪಂಚ ಗ್ಯಾರಂಟಿಗಳು ಕಾಂಗ್ರೆಸ್ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಆದರೆ, ಬಿಜೆಪಿ ವಾಮ ಮಾರ್ಗವನ್ನು ಬಳಸಿ ಚುನಾವಣೆಯಲ್ಲಿ ಗೆಲುವು ಸಾಧಿಸುವ ಕುತಂತ್ರ ಮಾಡುತ್ತಿದೆ. ಈ ಕುತಂತ್ರ ಫಲಿಸುವುದಿಲ್ಲ. ಸಾಧನೆಯನ್ನು ಇಟ್ಟುಕೊಂಡು ನಾವು ಪ್ರಚಾರ ಮಾಡಬೇಕೇ ಹೊರತು, ಮತದಾರರ ಪಟ್ಟಿಯಲ್ಲಿ ಡುಪ್ಲಿಕೇಟ್ ಮತದಾರರನ್ನು ಸೇರಿಸಿ ಚುನಾವಣೆ ಮಾಡುವುದು ಸರಿಯಲ್ಲ. ಬಿಜೆಪಿಯವರು ಎಷ್ಟೇ ಕುತಂತ್ರ ಮಾಡಿದರೂ ಗೆಲುವು ನಮ್ಮದೇ. ಎಚ್. ವೈ. ಮೇಟಿ ಅವರು ಕಳೆದ ಸಲ ಗೆದ್ದಿದ್ದರು. ಅವರು ಅಂದು ಎಷ್ಟು ಅಂತರದಿಂದ ಗೆದ್ದಿದ್ದರೋ ಅದಕ್ಕಿಂತಲೂ ಹೆಚ್ಚಿನ ಮತಗಳ ಅಂತರದಲ್ಲಿ ಅವರ ಪುತ್ರ ಉಮೇಶ ಮೇಟಿ ಗೆಲ್ಲುತ್ತಾರೆ ಎಂದು ಅವರು ಭವಿಷ್ಯ ನುಡಿದರು.
ಮತಕ್ಷೇತ್ರದ ತುಂಬಾ ನಾನೂ ಪ್ರತಿದಿನ ಓಡಾಡಿರುವೆ. ಜನರ ನಾಡಿ ಮಿಡೀತ ಅರಿತಿರುವೆ. ದಿ. ಎಚ್. ವೈ. ಮೇಟಿ ಅವರ ಕೆಲಸ, ಅವರ ಸರಳ, ಸಜ್ಜನ ವ್ಯಕ್ತಿತ್ವವನ್ನು ಬಾಗಲಕೋಟೆಯ ಜನ ಇಂದೂ ನೆನಪಿಸಿಕೊಳ್ಳುತ್ತಾರೆ ಎಂದು ಶಾಸಕರು ಹೇಳಿದರು.
ಬಿಜೆಪಿ ಅಭ್ಯರ್ಥಿ ಕಳೆದ ಬಾರಿ ಸೋತಿದ್ದಾರೆ. ಹೀಗಾಗಿ ಬೇರೆ ಬೇರೆ ಊರಿನ ಮತದಾರರನ್ನು ನಗರ ವಿಧಾನಸಭೆ ಮತಕ್ಷೇತ್ರಕ್ಕೆ ಸೇರಿಸುವ ಕೆಲಸ ಮಾಡುತ್ತಿದ್ದಾರೆ. ಬಾಗಲಕೋಟೆ ನಗದರದ ಮತಗಟ್ಟೆ ಸಂಖ್ಯೆ 91, 97, 98, 99, 145, 194, 195 ಮತ್ತು 196 ಮತಗಟ್ಟೆಗಳಲ್ಲಿ ವೈದ್ಯಕೀಯ, ಅರೆವೈದ್ಯಕೀಯ ಮತ್ತು ಎಂಜಿನೀಯರಿAಗ್ ಕಾಲೇಜಿನ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರಿದ್ದಾರೆ. ಈ ಎಲ್ಲ ಭೂತ್‌ಗಳಲ್ಲಿ ಖೊಟ್ಟಿ ಮತದಾನ ನಡೆಯುವ ಆತಂಕವೂ ಇದೆ. ಹೀಗಾಗಿ ಚುನಾವಣಾಧಿಕಾರಿಗಳು ಈ ಬಗ್ಗೆ ವಿಶೇಷ ಮುತವರ್ಜಿ ವಹಿಸಿ ಖೊಟ್ಟಿ ಹೆಸರುಗಳನ್ನು ಕಡಿಮೆ ಮಾಡಬೇಕು ಮತ್ತು ಖೊಟ್ಟಿ ಮತದಾನ ತಡೆಯುವ ನಿಟ್ಟಿನಲ್ಲಿ ಗಂಭೀರ ಕ್ರಮಗ ಕೈಗೊಳ್ಳಬೇಕು. ಅಲ್ಲಿ ಮುನ್ನೆಚ್ಚೆರಿಕೆ ಕ್ರಮವಾಗಿ ಹೆಚ್ಚಿನ ಭದ್ರತೆ ಒದಗಿಸಬೇಕು. ಸಿಸಿಟಿವಿ ಕ್ಯಾಮೆರಾ, ಸ್ಟ್ಯಾಟಿಕ್ ಕ್ಯಾಮೆರಾ ಅಳವಡಿಸಬೇಕ ಸಿ.ಐ.ಎಸ್.ಎಫ್ ಭದ್ರತಾ ತುಕಡಿಗಳನ್ನು ನಿಯೋಜಿಸಬೇಕು. ಬಾಗಲಕೋಟೆ ನಗರ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಎರಡೆರಡು ಸಲ ಹೆಸರು ನೋಂದಾವಣೆ ಮಾಡಿಕೊಂಡಿರುವ ಮತದಾರರ ಬಗ್ಗೆ ಕೂಲಂಕಶವಾಗಿ ಪರಿಶೀಲನೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು
ನಿಷ್ಪಕ್ಷಪಾತ, ಪಾರದರ್ಶಕ ಹಾಗೂ ನಿರ್ಭೀತಿ ವಾತಾವರಣದಲ್ಲಿ ಮತದಾನ ನಡೆಸಲು ಎಲ್ಲಾ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಈಗಾಗಲೇ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಲಾಗಿದೆ. ಸುಮಾರು 4000 ಖೊಟ್ಟಿ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿರುವ ಕುರಿತು ಗಮನಕ್ಕೆ ಬಂದಿದ್ದು, ಈ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸುವಂತೆ ಮನವಿ ಮಾಡಿಕೊಂಡಿದ್ದೇವೆ ಎಂದು ಶಾಸಕ ಸುನೀಲಗೌಡ ಪಾಟೀಲ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಪ್ರೊ. ರಾಜು ಆಲಗೂರ, ಕೆಪಿಸಿಸಿ ಪ್ರಚಾರ ಸಮಿತಿ ಬಾಗಲಕೋಟೆ ಜಿಲ್ಲಾಧ್ಯಕ್ಷ ನಾಗರಾಜ ಹದ್ಲಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ಚಂದ್ರಶೇಖರ ರಾಠೋಡ, ವಿಜಯಪುರ ವಿಡಿಎ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಎನ್. ಎಸ್. ಯು. ಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ, ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ