ಹೆಚ್ಚಿನ ದಾಖಲಾತಿಗೆ ಬಿಇಒ ಕೇಶವ ಪೆಟ್ಲೂರ ಮನವಿ
ಬಾದಾಮಿ:Kasturba Gandhi Balika Vidyalaya ವಸತಿ ಶಾಲೆಗಳಿಗೆ ಅರ್ಹ ಹೆಣ್ಣುಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾತಿ ಮಾಡಿಸಲು ಸಮುದಾಯದವರು ಸಹಕರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ Keshav Vaman Petlur ಮನವಿ ಮಾಡಿದರು.
ಬುಧವಾರ ತಾಲೂಕಿನ ಯಂಕಂಚಿ ಮಣಿನಾಗರ ಗ್ರಾಮದ ಕೆಜಿಬಿವಿ ವಸತಿ ಶಾಲೆಯಲ್ಲಿ 2026-27ನೇ ಸಾಲಿನ ದಾಖಲಾತಿ ಆಂದೋಲನದ ಪೂರ್ವಭಾವಿ ಸಭೆ ನಡೆಯಿತು. ಈ ವೇಳೆ ಪ್ರಚಾರ ಸಾಮಗ್ರಿ ಬಿಡುಗಡೆ ಹಾಗೂ ಕೆಜಿಬಿವಿ ಸಮೀಕ್ಷಾ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಶಾಲೆಯಿಂದ ವಂಚಿತರಾಗಿರುವ ಅರ್ಹ ಹೆಣ್ಣುಮಕ್ಕಳನ್ನು ಗುರುತಿಸಿ ದಾಖಲಾತಿ ಮಾಡಿಸಬೇಕು ಎಂದರು.
11ರಿಂದ 14 ವರ್ಷದೊಳಗಿನ 6ರಿಂದ 8ನೇ ತರಗತಿಯ ಬಾಲಕಿಯರಿಗಾಗಿ ಉಚಿತ ಸೌಲಭ್ಯಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಏಕೈಕ ವಸತಿ ಶಾಲೆಯಾಗಿದೆ. ಶಾಲೆಬಿಟ್ಟವರು, ಶಾಲೆಗೆ ದಾಖಲಾಗದವರು, ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತರು, ಅನಾಥರು ಹಾಗೂ ವಿವಿಧ ಕಾರಣಗಳಿಂದ ಶಿಕ್ಷಣದಿಂದ ದೂರ ಉಳಿದಿರುವ ಹೆಣ್ಣುಮಕ್ಕಳಿಗೆ ಇಲ್ಲಿ ಅವಕಾಶವಿದೆ ಎಂದು ತಿಳಿಸಿದರು.
ಅರ್ಹ ವಿದ್ಯಾರ್ಥಿನಿಯರು ಮೇ 26ರಿಂದ ಜೂನ್ 1ರೊಳಗೆ ಆನ್‌ಲೈನ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮುಖ್ಯಶಿಕ್ಷಕಿ ಬಸಮ್ಮಾ ನರಸಾಪೂರ ಅವರನ್ನು ಮೊಬೈಲ್ ಸಂಖ್ಯೆ 9449142409ರಲ್ಲಿ ಸಂಪರ್ಕಿಸಬಹುದು ಎಂದು ಹೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ. ದೊಡ್ಡಪ್ಪನ್ನವರ ಮಾತನಾಡಿ, ಕೆಜಿಬಿವಿ ಶಾಲೆಗಳಲ್ಲಿ ಸರ್ಕಾರದಿಂದ ದೊರೆಯುವ ಉಚಿತ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಮುಖ್ಯಶಿಕ್ಷಕಿ ಬಸಮ್ಮಾ ನರಸಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜ ಹಳಗೇರಿ, ಶಿಕ್ಷಣ ಸಂಯೋಜಕರಾದ ಎಂ.ಸಿ. ನಾಲತವಾಡ, ವೈ.ಬಿ. ಚಲವಾದಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಜಾವೇದ್ ಶೇಖ್, ಎಸ್.ಎಸ್. ಯಲಿಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ