ಮೂರ್ತಿ ಪ್ರತಿಷ್ಠಾಪನೆಗೆ ಆಗ್ರಹಿಸಿ ಕದಂಬ ಸೈನ್ಯದಿಂದ ಮನವಿ
By Petkarmedia news Desk| badami
ಬಾದಾಮಿ: ಕೇಂದ್ರ ಸರ್ಕಾರದ ಹೃದಯ (HRIDAY) ಯೋಜನೆಯಡಿ ನಿರ್ಮಾಣಗೊಂಡಿರುವ ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿ ಹಾಗೂ ಜಗಜ್ಯೋತಿ ಬಸವಣ್ಣನವರ ಮೂರ್ತಿಗಳನ್ನು ಶೀಘ್ರ ಪ್ರತಿಷ್ಠಾಪನೆ ಮಾಡಲು ಸ್ಥಳಾವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ಕದಂಬ ಸೈನ್ಯದ ಪದಾಧಿಕಾರಿಗಳು ತಹಶೀಲ್ದಾರ್ ಎಸ್.ಬಿ. ಬೊಮ್ಮನ್ನವರ ಅವರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರದ ಅನುದಾನದಲ್ಲಿ ಸುಮಾರು ₹3 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಎರಡು ಇಮ್ಮಡಿ ಪುಲಿಕೇಶಿ ಹಾಗೂ ಒಂದು ಬಸವಣ್ಣನವರ ಮೂರ್ತಿಗಳು ಕಳೆದ ಮೂರು ವರ್ಷಗಳಿಂದ ಬಾದಾಮಿ–ರಾಮದುರ್ಗ ರಸ್ತೆಯ ಬಳಿ ಪ್ರತಿಷ್ಠಾಪನೆ ಆಗದೆ ಬಿದ್ದಿವೆ ಎಂದು ಆರೋಪಿಸಿದರು. ಸೂಕ್ತ ರಕ್ಷಣೆ ಇಲ್ಲದೆ ಮಳೆ, ಬಿಸಿಲಿಗೆ ಮೂರ್ತಿಗಳು ಹಾನಿಗೊಳಗಾಗುತ್ತಿದ್ದು, ಸಮೀಪದ ಸಿಮೆಂಟ್ ಘಟಕದಿಂದ ಧೂಳು ಆವರಿಸಿ ಮತ್ತಷ್ಟು ಹಾಳಾಗುತ್ತಿವೆ ಎಂದು ದೂರಿದರು.
ಬಾದಾಮಿ ಪುರಸಭೆ ಸ್ಥಳಾವಕಾಶ ನೀಡದ ಕಾರಣ ಮೂರ್ತಿಗಳ ಪ್ರತಿಷ್ಠಾಪನೆ ವಿಳಂಬವಾಗಿದೆ ಎಂದು ಕದಂಬ ಸೈನ್ಯ ಆರೋಪಿಸಿದೆ. ಕನ್ನಡ ನಾಡಿನ ಹೆಮ್ಮೆಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿ ಹಾಗೂ ಜಗಜ್ಯೋತಿ ಬಸವಣ್ಣನವರ ಮೂರ್ತಿಗಳು ಪ್ರತಿಷ್ಠಾಪನೆ ಆಗದೆ ಇರುವುದು ಕನ್ನಡಿಗರಿಗೆ ಅವಮಾನವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಮದುರ್ಗ ವೃತ್ತದಲ್ಲಿ ಇಮ್ಮಡಿ ಪುಲಿಕೇಶಿ ಮೂರ್ತಿ ಪ್ರತಿಷ್ಠಾಪನೆಗೆ ಶಂಕುಸ್ಥಾಪನೆ ನೆರವೇರಿಸಿರುವುದನ್ನು ಸ್ವಾಗತಿಸಿದ ಕದಂಬ ಸೈನ್ಯ, ಈಗಾಗಲೇ ಸಿದ್ಧವಾಗಿರುವ ಮೂರ್ತಿಗಳಿಗೆ ಕೂಡ ತಕ್ಷಣ ಸ್ಥಳ ನಿಗದಿ ಮಾಡಿ ಪ್ರತಿಷ್ಠಾಪನೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿತು.
ಈ ಸಂದರ್ಭದಲ್ಲಿ ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ರಾಜ್ಯ ಕಾರ್ಯದರ್ಶಿ ವಿನಾಯಕ ಸಂಡೂರ, ಜಿಲ್ಲಾಧ್ಯಕ್ಷ ಶಿವು ಇಸರಡ್ಡಿ ಸೇರಿದಂತೆ ಹಲವು ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ