ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ

ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ

By PetkarMedia news desk| Bagalkot

ಬಾಗಲಕೋಟೆ: ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಒಟ್ಟು 21,866 ಮತಗಳ ಅಂತರದಿಂದ ವಿಜಯಶಾಲಿಯಾಗಿರುವ ಉಮೇಶ ಮೇಟಿ ಅವರಿಗೆ ಕ್ಷೇತ್ರದ ಮತದಾರರು ಭಾರೀ ಬೆಂಬಲ ವ್ಯಕ್ತಪಡಿಸಿದ್ದಾರೆ.




ಮತ ಎಣಿಕೆ ಆರಂಭವಾದ ಕ್ಷಣದಿಂದಲೇ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದ್ದು, ಅಂತಿಮ ಸುತ್ತಿನವರೆಗೂ ಆ ಮುನ್ನಡೆ ಮುಂದುವರಿಯಿತು. ಈ ಮೂಲಕ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಹತ್ವದ ಜಯ ಲಭಿಸಿದೆ.

ಗೆಲುವಿನ ಬಳಿಕ ಚುನಾವಣಾಧಿಕಾರಿಗಳು ಉಮೇಶ ಮೇಟಿ ಅವರಿಗೆ ಅಧಿಕೃತ ಪ್ರಮಾಣ ಪತ್ರ ನೀಡಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ, ಶಾಸಕರಾದ ಜೆ.ಟಿ. ಪಾಟೀಲ, ವಿಜಯಾನಂದ ಕಾಶಪ್ಪನವರ್, ಬಿ.ಬಿ. ಚಿಮ್ಮನಕಟ್ಟಿ, ಎಸ್.ಜಿ. ನಂಜಯ್ಯನಮಠ, ಅಜಯಕುಮಾರ ಸರನಾಯಕ, ಮಲ್ಲಿಕಾರ್ಜುನ ಚರಂತಿಮಠ, ನಾಗರಾಜ್ ಹದ್ಲಿ, ಹೊಳಬಸು ಶೆಟ್ಟರ, ವೀಣಾ ಕಾಶಪ್ಪನವರ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ಉಮೇಶ ಮೇಟಿ, ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಹಾಗೂ ಪಕ್ಷದ ಪ್ರಣಾಳಿಕೆ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಅದೇ ಗೆಲುವಿಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.

ಇನ್ನೊಂದೆಡೆ, ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಗುಲಾಲ್ ಎರಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಉಮೇಶ ಮೇಟಿ ಅವರ ಭಾವಚಿತ್ರ ಹಿಡಿದು ಜಯಘೋಷ ಕೂಗಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಕಾಮೆಂಟ್‌ಗಳು