ವ್ಯಾಪಾರಸ್ಥರ ಸಮಸ್ಯೆ ಪರಿಹಾರಕ್ಕೆ ಜೋಡೆತ್ತಿನ ಕೆಲಸ-ತಪಶೆಟ್ಟಿ
By PetkarMedia news desk: Bagalkot
ಬಾಗಲಕೋಟೆ : ವಿಶ್ವದಾದ್ಯಂತ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ರೋಟರಿ ಕ್ಲಬ್‌ನ ಸೇವೆ ಮಾದರಿಯಾಗಿದೆ. ಈ ಸಂಸ್ಥೆಯ ಪ್ರತಿಯೊಬ್ಬ ಸದಸ್ಯರು, ಮಾದರಿ ಬಾಗಲಕೋಟೆ ನಿರ್ಮಾಣಕ್ಕೆ ನನ್ನೊಂದಿಗೆ ಕೈಜೋಡಿಸಬೇಕು ಎಂದು ನೂತನ ಶಾಸಕ ಉಮೇಶ ಎಚ್. ಮೇಟಿ ಮನವಿ ಮಾಡಿದರು.
ನವನಗರದ ನಾವಲಗಿ ಜಿನ್‌ನಲ್ಲಿ ರೋಟರಿ ಕ್ಲಬ್‌ನಿಂದ ನೂತನ ಶಾಸಕ ಉಮೇಶ ಮೇಟಿ, ಬಿಟಿಡಿಎ ನೂತನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅವರಿಗೆ ಹಮ್ಮಿಕೊಂಡಿದ್ದ ಗೌರವ ಅಭಿನಂದನೆ ಹಾಗೂ ರೋಟರಿ ವಾರದ ಸಭೆಯಲ್ಲಿ ಅವರು ಮಾತನಾಡಿದರು.
ಇದೊಂದು ಪಕ್ಷಾತೀತ, ಜಾತ್ಯಾತೀತವಾದ ಸಾಮಾಜಿಕ ಸೇವಾ ಸಂಘಟನೆ. ಈ ಸಂಸ್ಥೆಯಲ್ಲಿ ಇರುವವರು ಪ್ರತಿಯೊಬ್ಬರೂ ಪ್ರಜ್ಞಾವಂತರು, ಸಮಾಜಕ್ಕಾಗಿ ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದವರು. ಈ ಸಂಸ್ಥೆಯೊಂದಿಗೆ ನಮ್ಮ ತಂದೆ ದಿ.ಎಚ್.ವೈ. ಮೇಟಿ ಅವರು ಉತ್ತಮ ಒಡನಾಟ ಹೊಂದಿದ್ದರು. ಅದೇ ಒಟನಾಡವನ್ನು ನನ್ನೊಂದಿಗೆ ಮುಂದುವರೆಸಲು ಕೇಳಿಕೊಳ್ಳುವೆ ಎಂದರು.
ಬಾಗಲಕೋಟೆ ಮಾದರಿ ಕ್ಷೇತ್ರ ಮಾಡಲು ನನ್ನದೇ ಆದ ಕಲ್ಪನೆ, ಗುರಿ ಇದೆ. ಪ್ರಜ್ಞಾವಂತರಾದ ರೋಟರಿ ಸಂಸ್ಥೆಯ ಸದಸ್ಯರು, ಸದಾ ಸಲಹೆ-ಸಹಕಾರ ನೀಡಬೇಕು. ರೋಟರಿ ಸಂಸ್ಥೆಯ ಎಲ್ಲ ಕಾರ್ಯಗಳಿಗೂ ನಮ್ಮ ಬೆಂಬಲ ಇರಲಿದೆ ಎಂದು ತಿಳಿಸಿದರು.
ಜೋಡೆತ್ತುಗಳಾಗಿ ಕೆಲಸ :
ಸನ್ಮಾನ ಸ್ವೀಕರಿಸಿದ ಬಿಟಿಡಿಎ ನೂತನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮಾತನಾಡಿ, ರೋಟರಿ ಕ್ಲಬ್, ಇಡೀ ವಿಶ್ವದಾದ್ಯಂತ ಸಾಮಾಜಿಕ ಸೇವೆಯಲ್ಲಿ ತೊಡಗಿದೆ. ಹಿಂದೆ ನಾನೂ ಕೂಡ ಈ ಸಂಸ್ಥೆಯ ಸದಸ್ಯನಾಗಿದ್ದೆ. ರೋಟರಿ ಕ್ಲಬ್ ನಡೆಸುವ ಎಲ್ಲ ಸೇವಾ ಕಾರ್ಯಗಳಿಗೆ ಬಿಟಿಡಿಎ ಮತ್ತು ಬಸವೇಶ್ವರ ಬ್ಯಾಂಕ್‌ನಿಂದ ಸಹಕಾರ ನೀಡಲಾಗುವುದು ಎಂದರು.
ಬಾಗಲಕೋಟೆಗೆ ಉಮೇಶ ಮೇಟಿ ಅವರು ನೂತನವಾಗಿ ಶಾಸಕರಾಗಿದ್ದಾರೆ. ನಾನು ಬಿಟಿಡಿಎಗೆ ಅಧ್ಯಕ್ಷನಾಗಿದ್ದೇನೆ. ಇಲ್ಲಿನ ವ್ಯಾಪಾರಸ್ಥರು, ಸಂತ್ರಸ್ತರ ಸಮಸ್ಯೆ ಬಹಳಷ್ಟಿವೆ. ಅವುಗಳ ಪರಿಹಾರಕ್ಕಾಗಿ ನಾವಿಬ್ಬರು ಜೋಡೆತ್ತುಗಳಾಗಿ ಕೆಲಸ ಮಾಡುತ್ತೇವೆ. ರಾಜ್ಯ ಮಟ್ಟದ ಸಮಸ್ಯೆ ಇದ್ದಲ್ಲಿ ಶಾಸಕರು ಸ್ಪಂದಿಸಲಿದ್ದಾರೆ. ಬಿಟಿಡಿಎ ವ್ಯಾಪ್ತಿಯ ಸಮಸ್ಯೆಗಳಿದ್ದಲ್ಲಿ ನನ್ನ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.
ಬಾಗಲಕೋಟೆಯಲ್ಲಿ ವ್ಯಾಪಾರಸ್ಥರ ಸಮಸ್ಯೆ ಪರಿಹಾರಕ್ಕೆ ವಿಶೇಷ ಒತ್ತು ನೀಡಬೇಕಿದೆ. ಈ ನಿಟ್ಟಿನಲ್ಲಿ ಶಾಸಕರು, ನಾನು ಗಂಭೀರ ಪ್ರಯತ್ನದಲ್ಲಿದ್ದೇವೆ. ಈಗಾಗಲೇ ಒಂದೆಡೆ ವಾಣಿಜ್ಯ ವಲಯ ನಿರ್ಮಾಣಕ್ಕಾಗಿ ಪ್ರಯತ್ನ ನಡೆಸಿದ್ದೇವೆ ಎಂದು ತಿಳಿಸಿದರು.
ರೋಟರಿ ಕ್ಲಬ್‌ನ ಸಹಾಯಕ ಗೌವರನರ್ ಡಾ।ನಾರಾಯಣ ಹೆರಕಲ್ ಮಾತನಾಡಿ, ವಿಶ್ವದಲ್ಲಿ 45 ಸಾವಿರ ರೋಟರಿ ಕ್ಲಬ್‌ಗಳು, 1.45 ಮಿಲಿನಿಯನ್ ಸದಸ್ಯರು ಇದ್ದೇವೆ. ಪೊಲೀಯೋ ಮುಕ್ತಕ್ಕಾಗಿ ರೋಟರಿ ಸಂಸ್ಥೆ ನಡೆಸಿದ ಸೇವೆ, ಇಡೀ ವಿಶ್ವವೇ ಮೆಚ್ಚಿದೆ ಎಂದರು.
ಬಾಗಲಕೋಟೆಯಲ್ಲೂ ರೋಟರಿ ಕ್ಲಬ್‌ನಿಂದ ಉದ್ಯಾನವನ ನಿರ್ಮಾಣ, ಬೇಸಿಗೆಯಲ್ಲಿ ದನ-ಕರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಬಡ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ ಸೇರಿದಂತೆ ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಮುಂದುವರೆಸಿದೆ ಎಂದು ತಿಳಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಮಲ್ಲಿಕಾರ್ಜುನ ಹದ್ಲಿ ಸ್ವಾಗತಿಸಿದರು. ಶಿವಕುಮಾರ ನಂದಿಕೋಲಮಠ ಮತ್ತು ಶ್ರೀಶೈಲ ಬಿರಾದಾರ ಪರಿಚಯಿಸಿದರು. ಮಲ್ಲನಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಸಿ.ಎಸ್. ಕಟಗೇರಿ ವಂದಿಸಿದರು.
ಜಿ.ಪಂ. ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ಮುಖಂಡರಾದ ನಾಗರಾಜ ಹದ್ಲಿ, ಮಲ್ಲಿಕಾರ್ಜುಣ ಮೇಟಿ, ಶಶಿಕಾಂತ ಪೂಜಾರ, ಶಿವಾನಂದ ಅಬ್ದುಲ್‌ಪುರ, ರಾಚಪ್ಪ ಪಟ್ಟಣದ, ವೈ.ವೈ. ತಿಮ್ಮಾಪುರ, ನಿಂಗಣ್ಣ ಗೋಡಿ, ರೋಟರಿ ಕ್ಲಬ್ ಖಜಾಂಚಿ ಸಂತೋಷ ಪಾಟೀಲ, ಹಿರಿಯ ಸದಸ್ಯರಾದ ಎಸ್.ಕೆ. ಯಡಹಳ್ಳಿ, ಡಾ।ಗಿರೀಶ ಮಸೂರಕರ, ರವಿ ಪಾಟೀಲ, ಎಸ್.ಎಸ್. ಕಂಪಾಪುರಮಠ, ಎಸ್.ಡಿ. ಮಠ, ಪ್ರಕಾಶ ಭೂಲತ ಡಾ।ಕಡಿವಾಲ, ಸಿ.ಎಸ್. ಕಟಗೇರಿ, ವಿಶ್ವನಾಥ ವೈಜಾಪುರ, ಕೆ.ಎಂ. ಸುರೇಂದ್ರಕುಮಾರ, ಮಲ್ಲಿನಾಥ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ