“ಒಂದು ಪಾತ್ರೆ ನೀರು… ಒಂದು ಮುಷ್ಟಿ ಕಾಳು…ಮೂಕ ಜೀವಿಗಳಿಗೆ ಅದು ಜೀವದಾನ.”

ಪ್ರಚಾರಕ್ಕಾಗಿ ಅಲ್ಲ, ಪ್ರೇರಣೆಗಾಗಿ: ಬಿಸಿಲಿನಲ್ಲಿ ಪ್ರಾಣಿ-ಪಕ್ಷಿಗಳಿಗೆ ಜೀವದಾನವಾಗಿರುವ ಸೇವಾಕಾರ್ಯ

By PetkarMedia special Story

ಬಾಗಲಕೋಟೆ: ಈ ವರ್ಷದ ಬೇಸಿಗೆ ತೀವ್ರತೆಯ ಗರಿಷ್ಠ ಮಟ್ಟ ತಲುಪಿದ್ದು, ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ದಾಟಿದೆ. 

ಜನಸಾಮಾನ್ಯರ ಬದುಕೇ ಬಿಸಿಲಿನ ತಾಪಕ್ಕೆ ತತ್ತರಿಸಿರುವಾಗ, ಪ್ರಾಣಿ-ಪಕ್ಷಿಗಳ ಸ್ಥಿತಿ ಇನ್ನಷ್ಟು ಸಂಕಷ್ಟಕರವಾಗಿದೆ. ಆಹಾರ ಮತ್ತು ನೀರಿನ ಕೊರತೆಯಿಂದ ಅವು ಬದುಕು–ಸಾವಿನ ನಡುವೆ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂತಹ ಸಂದರ್ಭದಲ್ಲಿ ಬಾಗಲಕೋಟೆಯ RSS ಪಾಂಚಜನ್ಯ ಶಾಖೆಯ ಕಾರ್ಯಕರ್ತರು ಮಾನವೀಯತೆಯ ಸೇವೆಯೊಂದನ್ನು ನಿರಂತರವಾಗಿ ನಡೆಸುತ್ತಿದ್ದು, ಸಮಾಜಕ್ಕೆ ಮಾದರಿಯಾಗಿದ್ದಾರೆ. ಕಳೆದ 9 ವರ್ಷಗಳಿಂದ ಬೇಸಿಗೆ ಆರಂಭವಾಗುತ್ತಿದ್ದಂತೆಯೇ ನಗರದಲ್ಲಿನ 100ಕ್ಕೂ ಅಧಿಕ ಸ್ಥಳಗಳಲ್ಲಿ ಪ್ರಾಣಿ-ಪಕ್ಷಿಗಳಿಗಾಗಿ ನೀರು ಮತ್ತು ಕಾಳಿನ ವ್ಯವಸ್ಥೆ ಮಾಡಲಾಗುತ್ತಿದೆ.

ಪ್ರತಿದಿನ ಬೆಳಿಗ್ಗೆ ಶಾಖೆ ಮುಗಿದ ಬಳಿಕ ಕಾರ್ಯಕರ್ತರು ನೀರಿನ ಮಡಿಕೆಗಳು, ಪ್ಲಾಸ್ಟಿಕ್ ಬಾಟಲ್‌ಗಳು ಹಾಗೂ ಕಬ್ಬಿಣದ ಡಬ್ಬಗಳಲ್ಲಿ ನೀರು ತುಂಬಿಸಿ, ಕಾಳುಗಳನ್ನು ಹಾಕುವ ಕೆಲಸ ಮಾಡುತ್ತಾರೆ. ಈ ಸೇವಾ ಕಾರ್ಯದಲ್ಲಿ ಶಾಖೆಗೆ ಬರುವ ಬಾಲಕರು ಮತ್ತು ಶಿಶುಗಳೂ ಉತ್ಸಾಹದಿಂದ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಅವರ ಈ ನಿಸ್ವಾರ್ಥ ಸೇವಾಭಾವನೆ ಹಿರಿಯ ಕಾರ್ಯಕರ್ತರಿಗೂ ಪ್ರೇರಣೆಯಾಗುತ್ತಿದೆ.

ಬೇಸಿಗೆಯ ಆರಂಭದಿಂದ ಮಳೆಗಾಲ ಆರಂಭವಾಗುವವರೆಗೆ ಈ ಸೇವಾ ಕಾರ್ಯ ನಿರಂತರವಾಗಿ ನಡೆಯುತ್ತದೆ. ಶಾಲಾ ರಜೆಯಲ್ಲಿರುವ ಮಕ್ಕಳಿಗೂ ಈ ಕಾರ್ಯದ ಮೂಲಕ ಪ್ರಾಣಿ-ಪಕ್ಷಿಗಳ ಬಗ್ಗೆ ಕಾಳಜಿ ಮತ್ತು ಸೇವಾಭಾವನೆ ಮೂಡುತ್ತಿದೆ.

ಈ ಕಾರ್ಯಕ್ಕೆ ಅಗತ್ಯವಿರುವ ಸಾಮಗ್ರಿಗಳ ವ್ಯವಸ್ಥೆಯನ್ನು ನರೇಂದ್ರ ಯುವಕ ಮಂಡಳ ಮಾಡುತ್ತಿದ್ದು, ಇನ್ನೂ ಹೆಚ್ಚಿನ ಜನರು ಈ ಸೇವೆಯಲ್ಲಿ ಕೈಜೋಡಿಸಬೇಕು ಎಂಬ ಆಶಯವನ್ನು ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ.

“ನಮ್ಮ ಮನೆಯ ಟೆರಸ್‌, ಕಿಟಕಿಯ ಪಕ್ಕ ಅಥವಾ ನೆರಳಿನ ಜಾಗದಲ್ಲಿ ಒಂದು ಪಾತ್ರೆ ನೀರು ಮತ್ತು ಸ್ವಲ್ಪ ಕಾಳು ಇಡುವುದರಿಂದ ಅನೇಕ ಪ್ರಾಣಿ-ಪಕ್ಷಿಗಳ ಜೀವ ಉಳಿಯಬಹುದು. ಇದು ಪ್ರಚಾರಕ್ಕಾಗಿ ಅಲ್ಲ, ಪ್ರೇರಣೆಗಾಗಿ,” ಎಂದು ನರೇಂದ್ರ ಯುವಕ ಮಂಡಳ ಮನವಿ ಮಾಡಿದೆ.

ಮಾನವೀಯತೆಯ ಮೌಲ್ಯಗಳನ್ನು ಸಮಾಜದಲ್ಲಿ ಜೀವಂತವಾಗಿಡುವ ಈ ಚಿಕ್ಕ ಅಳಿಲು ಸೇವೆ, ಇಂದಿನ ತುರ್ತು ಕಾಲದಲ್ಲಿ ನಿಜಕ್ಕೂ ಮಾದರಿಯ ಕಾರ್ಯವಾಗಿದೆ.

ಕಾಮೆಂಟ್‌ಗಳು