ಹೊಸ ಮುರನಾಳದಲ್ಲಿ ಸಾಮೂಹಿಕ ಉಪನಯನ
By PetkarMedia Desk|Bagalkot
ಬಾಗಲಕೋಟೆ: ಸಮೀಪದ ಹೊಸ ಮುರನಾಳ ಪುನರ್ವಸತಿ ಕೇಂದ್ರದಲ್ಲಿರುವ ಶ್ರೀ ಮಳೇರಾಜೇಂದ್ರಸ್ವಾಮಿ ಮಠದಲ್ಲಿ ಶುಕ್ರವಾರ ಸಾಮೂಹಿಕ ಉಪನಯನ ಹಾಗೂ ಧಾರ್ಮಿಕ ಸಭೆ ಭಕ್ತಿಭಾವದಿಂದ ನೆರವೇರಿತು.
ಆಂಧ್ರ ಪ್ರದೇಶದ ಕಂದಿಮಲ್ಲೆಯ ಪಲ್ಲೆ ಬ್ರಂಗಾರಿಗಾರಿ ಮಠದ ಜಗದ್ಗುರು ಮದ್ವಿರಾಠ ಪೋತಲ್ಲೂರು ವೀರಬ್ರಹ್ಮೇಂದ್ರಸ್ವಾಮಿಗಳ 8ನೇ ವಂಶಸ್ಥರಾದ ಪೂಜ್ಯಶ್ರೀ ವೀರಭದ್ರಸ್ವಾಮಿಗಳು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿ, “ಸಂಸ್ಕಾರಯುತ ಜೀವನಕ್ಕೆ ಉಪನಯನ ಮೊದಲ ಹೆಜ್ಜೆಯಾಗಿದ್ದು, ಮಳೇರಾಜೇಂದ್ರಸ್ವಾಮಿ ಮಠ ರೈತರ ಬದುಕಿನ ಸಂಜೀವಿನಿಯಾಗಿದೆ” ಎಂದು ಹೇಳಿದರು.
ಶ್ರೀಮಠದ ಪೂಜ್ಯರಾದ ಗುರುನಾಥ ಮಹಾಸ್ವಾಮಿಗಳ ಸಂಕಲ್ಪದಂತೆ ಸುಮಾರು 30ಕ್ಕೂ ಹೆಚ್ಚು ವಟುಗಳಿಗೆ ಸಾಮೂಹಿಕ ಉಪನಯನ ನೆರವೇರಿಸಲಾಯಿತು. ಬ್ರಹ್ಮೋಪದೇಶದ ಮೂಲಕ ಮಕ್ಕಳಿಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬೋಧಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಸಾನಿಧ್ಯ ವಹಿಸಿದ್ದ ನಿತ್ಯಾನಂದಸ್ವಾಮಿಗಳು ಹಾಗೂ ಜಗನ್ನಾಥ ಮಹಾಸ್ವಾಮಿಗಳು ಮಾತನಾಡಿ, “ಸಂಸ್ಕಾರಗಳು ಬದುಕನ್ನು ಹಸನಗೊಳಿಸುತ್ತವೆ. ಶ್ರೀಮಠದಲ್ಲಿ ಸಾಮೂಹಿಕ ಉಪನಯನ ಮತ್ತು ಸಾಮೂಹಿಕ ವಿವಾಹಗಳ ಮೂಲಕ ಭಕ್ತರಿಗೆ ಆಸರೆಯಾಗುವ ಕಾರ್ಯ ನಡೆಯುತ್ತಿದೆ” ಎಂದರು.
ಹಿರಿಯ ಪೂಜ್ಯರಾದ ಮಳೆಯಪ್ಪಯ್ಯ ಮಹಾಸ್ವಾಮಿಗಳು ಮಾತನಾಡಿ, “ಮಠಗಳು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಬೇಕು. ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿಸಲು ಸಂಸ್ಕಾರ ಅಗತ್ಯ” ಎಂದು ಹೇಳಿದರು.
ಶ್ರೀ ಗುರುನಾಥ ಮಹಾಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿ, “ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆ ಮಾನವನ ವ್ಯಕ್ತಿತ್ವವನ್ನು ಉನ್ನತಿಗೇರಿಸುತ್ತವೆ. ಭಕ್ತರ ಸಹಕಾರದಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ” ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಪೂಜ್ಯರು, ಗ್ರಾಮಸ್ಥರು ಹಾಗೂ ಸಾವಿರಾರು ಭಕ್ತರು ಭಾಗವಹಿಸಿದ್ದರು. ಉಪನಯನ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನಡೆಯಿತು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ