₹2 ಕೋಟಿ ವಿಮೆ ಹಣಕ್ಕಾಗಿ ಮಾಜಿ ಸೈನಿಕನ ಕೊಲೆ; ಎಫ್‌ಎಸ್‌ಎಲ್ ಅಧಿಕಾರಿಗಳೂ ಅರೆಸ್ಟ್

2 ಕೋಟಿ ವಿಮೆ ಹಣಕ್ಕಾಗಿ ಮಾಜಿ ಸೈನಿಕನ ಕೊಲೆ; ಎಫ್‌ಎಸ್‌ಎಲ್ ಅಧಿಕಾರಿಗಳೂ ಅರೆಸ್ಟ್

ಬೆಳಗಾವಿ: ಎರಡು ಕೋಟಿ ರೂಪಾಯಿ ವಿಮೆ ಹಣ ಪಡೆಯುವ ಉದ್ದೇಶದಿಂದ ಮಾಜಿ ಸೈನಿಕ ಸಂದೀಪ್ ಮಂಜರಗಿ ಅವರನ್ನು ಪತ್ನಿ ಹಾಗೂ ಪ್ರಿಯಕರ ಸೇರಿ ಕೊಲೆ ಮಾಡಿಸಿದ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದ್ದು, ಪ್ರಕರಣ ಮುಚ್ಚಿಹಾಕಲು ಎಫ್‌ಎಸ್‌ಎಲ್ ಅಧಿಕಾರಿಗಳೇ ಸಹಕರಿಸಿದ್ದ ಆರೋಪದಡಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯ ಘಡಗೋರಿ ಗ್ರಾಮದ ಸಂದೀಪ್ ಮಂಜರಗಿ ಅವರ ಸಾವನ್ನು ಆರಂಭದಲ್ಲಿ ಬೈಕ್ ಅಪಘಾತ ಹಾಗೂ ಹೃದಯಾಘಾತ ಎಂದು ಬಿಂಬಿಸಲಾಗಿತ್ತು. ಆದರೆ ತನಿಖೆಯಲ್ಲಿ ಇದು ಪೂರ್ವನಿಯೋಜಿತ ಕೊಲೆ ಎಂಬುದು ಬೆಳಕಿಗೆ ಬಂದಿದೆ.

ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆ ಹಾಗೂ ಎಫ್‌ಎಸ್‌ಎಲ್ ವರದಿಯನ್ನು ತಿರುಚಿ ಕೇಸ್ ದಿಕ್ಕು ತಪ್ಪಿಸಲು ಯತ್ನಿಸಲಾಗಿದೆ ಎನ್ನಲಾಗಿದೆ. ಈ ಸಂಬಂಧ ಸೀನಿಯರ್ ಸೈಂಟಿಫಿಕ್ ಆಫೀಸರ್ ಪಿ.ಎನ್. ನಾಗರಾಜ್, ಲ್ಯಾಬ್ ಅಸಿಸ್ಟೆಂಟ್ ಚನ್ನಯ್ಯ, ಗುಮಾಸ್ತ ಅಪ್ಪಾಸಾಬ್ ನಾಯಿಕ್ ಹಾಗೂ ಎಫ್‌ಡಿಎ ಅಶೋಕ ಗುಜನಾಳ ಅವರನ್ನು ಬಂಧಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಮೃತನ ಪತ್ನಿ ಸುಮಾ ಹಾಗೂ ಪ್ರಿಯಕರ ಪುಂಡಲೀಕ ಡೊಂಬರ್ ನಡುವೆ ಕಳೆದ ಎರಡೂವರೆ ವರ್ಷಗಳಿಂದ ಅಕ್ರಮ ಸಂಬಂಧವಿತ್ತು. ಇದೇ ವೇಳೆ ಸಂದೀಪ್ ಹೆಸರಿನಲ್ಲಿ ಸುಮಾರು ₹2 ಕೋಟಿ ಮೌಲ್ಯದ ವಿಮೆ ಮಾಡಿಸಲಾಗಿದ್ದು, ಹಣಕ್ಕಾಗಿ ಕೊಲೆ ಸಂಚು ರೂಪಿಸಲಾಗಿತ್ತು ಎಂದು ತಿಳಿಸಿದರು.

ಜೆಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಸಲೈನ್ ಬಾಟಲಿಗೆ ವಿಷ ಮಿಶ್ರಣ ಮಾಡಿ ಸಂದೀಪ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಸುಮಾ, ಪ್ರಿಯಕರ ಪುಂಡಲೀಕ, ಸ್ನೇಹಿತ ಸಚಿನ್ ಸೇರಿದಂತೆ ಒಟ್ಟು 9 ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ.


ಬೆಳಗಾವಿಯಲ್ಲಿ ಮಾಜಿ ಸೈನಿಕ ಸಂದೀಪ್ ಮಂಜರಗಿ ಕೊಲೆ ಪ್ರಕರಣಕ್ಕೆ ಭಾರೀ ಟ್ವಿಸ್ಟ್! ₹2 ಕೋಟಿ ವಿಮೆ ಹಣಕ್ಕಾಗಿ ನಡೆದ ಸಂಚಿನಲ್ಲಿ ಎಫ್‌ಎಸ್‌ಎಲ್ ಅಧಿಕಾರಿಗಳೇ ಭಾಗಿಯಾಗಿದ್ದಾರೆಯೇ? ವರದಿ ತಿರುಚಿದ ಆರೋಪದಡಿ ನಾಲ್ವರು ಅಧಿಕಾರಿಗಳ ಬಂಧನ. ರಾಜ್ಯವನ್ನೇ ಬೆಚ್ಚಿಬೀಳಿಸಿದ ಪ್ರಕರಣದ ಸಂಪೂರ್ಣ ಮಾಹಿತಿ ಇಲ್ಲಿದೆ.

#Belagavi #MurderCase #SandeepManjragi #InsuranceFraud #FSL #CrimeNews #KarnatakaNews #BelagaviPolice #PetkarMedia #BreakingNews #ViralNews

ಕಾಮೆಂಟ್‌ಗಳು