ಶತಾಯುಷಿ ತಾಯಿಯ ನಿಧನದ ಸುದ್ದಿ ತಿಳಿದು 76 ವರ್ಷದ ಮಗಳು ಸಾವು
By PetkarMedia news desk: bagalkot
ಬಾಗಲಕೋಟೆ, ಜೂನ್ 1: ಹೆತ್ತ ತಾಯಿಯ ಮೇಲಿನ ಅಪಾರ ಪ್ರೀತಿ ಹಾಗೂ ತಾಯಿ-ಮಗಳ ಅವಿನಾಭಾವ ಸಂಬಂಧಕ್ಕೆ ಸಾಕ್ಷಿಯಾದ ಹೃದಯವಿದ್ರಾವಕ ಘಟನೆ ಜಮಖಂಡಿ ತಾಲೂಕಿನ ತೋದಲಬಾಗಿ ಗ್ರಾಮದಲ್ಲಿ ನಡೆದಿದೆ.
101 ವರ್ಷದ ಶತಾಯುಷಿ ಗಂಗವ್ವ ಚನ್ನಬಸಪ್ಪ ಪಾರ್ಥನಹಳ್ಳಿ ಅವರು ವಯೋಸಹಜ ಕಾರಣಗಳಿಂದ ನಿಧನರಾದ ಬೆನ್ನಲ್ಲೇ, ಅವರ 76 ವರ್ಷದ ಮಗಳು ಹಣಮವ್ವ ರಾಮು ಮುಜಗೋಣಿ ಕೂಡ ತೀವ್ರ ಆಘಾತದಿಂದ ಮೃತಪಟ್ಟಿದ್ದಾರೆ.
ಅಥಣಿ ತಾಲೂಕಿನ ಪಾರ್ಥನಹಳ್ಳಿ ಗ್ರಾಮದ ನಿವಾಸಿಯಾಗಿದ್ದ ಗಂಗವ್ವ ಅವರು ಕಳೆದ ಶುಕ್ರವಾರ ನಿಧನರಾಗಿದ್ದರು. ತಾಯಿಯ ಸಾವಿನ ಸುದ್ದಿ ತಿಳಿದ ಮಗಳು ಹಣಮವ್ವ ಅವರು ಅಂತಿಮ ದರ್ಶನ ಹಾಗೂ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ತೋದಲಬಾಗಿ ಗ್ರಾಮಕ್ಕೆ ಆಗಮಿಸಿದ್ದರು.
ತಾಯಿಯ ಪಾರ್ಥಿವ ಶರೀರವನ್ನು ಕಂಡು ಭಾವುಕರಾದ ಹಣಮವ್ವ ಅವರು ತೀವ್ರ ದುಃಖದಿಂದ ಕುಸಿದು ಬಿದ್ದಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ತಾಯಿ ನಿಧನವಾದ ಮರುದಿನವೇ ಮಗಳೂ ಸಾವನ್ನಪ್ಪಿರುವುದು ಕುಟುಂಬಸ್ಥರು ಹಾಗೂ ಗ್ರಾಮಸ್ಥರನ್ನು ಕಂಬನಿ ಮಿಡಿಯುವಂತೆ ಮಾಡಿದೆ.
ಶನಿವಾರ ಇಬ್ಬರ ಅಂತ್ಯಕ್ರಿಯೆಯನ್ನು ಸಕಲ ವಿಧಿವಿಧಾನಗಳೊಂದಿಗೆ ನೆರವೇರಿಸಲಾಗಿದ್ದು, ಈ ಘಟನೆ ಇಡೀ ಪ್ರದೇಶದಲ್ಲಿ ಶೋಕದ ವಾತಾವರಣ ಮೂಡಿಸಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ