ವಿಶ್ವ ತಂಬಾಕು ರಹಿತ ದಿನ: ಯುವಜನತೆಗೆ ತಂಬಾಕಿನಿಂದ ದೂರವಿರಲು ಮನವಿ : ಡಿಎಚ್ ಓ ಡಾ.ಮಂಜುನಾಥ

ತಂಬಾಕು ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಜಾಗೃತಿ ಅಭಿಯಾನ| ಶಾಲೆ-ಕಾಲೇಜುಗಳ ಸುತ್ತ ತಂಬಾಕು ಮಾರಾಟಕ್ಕೆ ಕಟ್ಟುನಿಟ್ಟಿನ ಕ್ರಮ

ವಿಶ್ವ ತಂಬಾಕು ರಹಿತ ದಿನ: ಯುವಜನತೆಗೆ ತಂಬಾಕಿನಿಂದ ದೂರವಿರಲು ಮನವಿ

By PetkarMedia News Desk| Bagalkot

ಬಾಗಲಕೋಟೆ: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಂಯುಕ್ತ ಆಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ–2026 ಅಂಗವಾಗಿ ಜಾಗೃತಿ ಜಾಥಾ ಸೋಮವಾರ ನಡೆಯಿತು.

ವಿಶ್ವ ತಂಬಾಕು ರಹಿತ ದಿನಾಚರಣೆ–2026 ಅಂಗವಾಗಿ ಜಾಗೃತಿ ಜಾಥಾಕ್ಕೆ ಸೋಮವಾರ ಚಾಲನೆ ನೀಡಲಾಯಿತು.



ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಜಾಥಾಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ಪಿ. ದಿಡ್ಡಿ ಮತ್ತು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಿ.ಎನ್. ಮಂಜುನಾಥ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

‘ಆಕರ್ಷಣೆಯನ್ನು ಬಹಿರಂಗಪಡಿಸುವುದು – ನಿಕೋಟಿನ್ ಮತ್ತು ತಂಬಾಕು ವ್ಯಸನವನ್ನು ಎದುರಿಸುವುದು’ ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಜಾಥಾ ಜಿಲ್ಲಾ ಆಸ್ಪತ್ರೆಯಿಂದ ನಗರಸಭೆ, ಕ್ರೀಡಾಂಗಣ ಮಾರ್ಗವಾಗಿ ಅರಣೋದಯ ಪ್ಯಾರಾಮೆಡಿಕಲ್ ಇನ್‌ಸ್ಟಿಟ್ಯೂಟ್‌ವರೆಗೆ ಸಂಚರಿಸಿತು. ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ತಂಬಾಕು ವಿರೋಧಿ ಘೋಷಣೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಡಿ.ಎನ್. ಮಂಜುನಾಥ, ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಮೇ 31ರಂದು ವಿಶ್ವ ತಂಬಾಕು ರಹಿತ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ತಂಬಾಕು ಮಾರಾಟ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಕ್ಕೆ ಸಂಬಂಧಿಸಿದ ಉಲ್ಲಂಘನೆಗಳ ವಿರುದ್ಧ ಆರೋಗ್ಯ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ. ಕಳೆದ ವರ್ಷ ₹2.5 ಲಕ್ಷಕ್ಕೂ ಅಧಿಕ ದಂಡ ಸಂಗ್ರಹಿಸಲಾಗಿದ್ದು, ಸುಮಾರು 250 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.

ಶಾಲೆ–ಕಾಲೇಜುಗಳ ಸುತ್ತಮುತ್ತ ತಂಬಾಕು ಮಾರಾಟ ಮತ್ತು ಸೇವನೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಜಾಗೃತಿ ಕಾರ್ಯಕ್ರಮಗಳನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ ತಿಂಗಳ ಪೂರ್ತಿ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ದಯಾನಂದ ಕರೆಯನವರ ಮಾತನಾಡಿ, ತಂಬಾಕು ಸೇವನೆಯು ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್, ಮೂತ್ರಪಿಂಡ ಕಾಯಿಲೆ, ಪಾರ್ಶ್ವವಾಯು ಸೇರಿದಂತೆ ಹಲವು ಸಾಂಕ್ರಾಮಿಕವಲ್ಲದ ರೋಗಗಳಿಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ತಂಬಾಕು ಬಳಕೆ ನಿಯಂತ್ರಣಕ್ಕೆ ಒತ್ತು ನೀಡಲಾಗುತ್ತಿದ್ದು, ಬಾಯಿ ಕ್ಯಾನ್ಸರ್ ಸೇರಿದಂತೆ ಬಾಯಿ ಆರೋಗ್ಯ ಸಮಸ್ಯೆಗಳಿಗೂ ತಂಬಾಕು ಪ್ರಮುಖ ಕಾರಣವಾಗಿದೆ. ತಂಬಾಕು ಸೇವಿಸುವವರಲ್ಲಿ ಕ್ಷಯರೋಗ ತಗುಲುವ ಮತ್ತು ಸಾವಿನ ಪ್ರಮಾಣ ಹೆಚ್ಚಾಗಿದ್ದು, ಗರ್ಭಿಣಿಯರಲ್ಲಿ ತಂಬಾಕು ಬಳಕೆಯಿಂದ ಗರ್ಭಪಾತ, ಅವಧಿಪೂರ್ವ ಹೆರಿಗೆ ಹಾಗೂ ಕಡಿಮೆ ತೂಕದ ಶಿಶು ಜನನದಂತಹ ಸಮಸ್ಯೆಗಳು ಉಂಟಾಗುತ್ತವೆ ಎಂದು ವಿವರಿಸಿದರು.

ಮಕ್ಕಳು ಮತ್ತು ಯುವಕರು ತಂಬಾಕು ವ್ಯಸನದತ್ತ ಆಕರ್ಷಿತರಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಯುವಜನತೆ ತಂಬಾಕು ಮತ್ತು ನಿಕೋಟಿನ್ ವ್ಯಸನದಿಂದ ದೂರವಿರಬೇಕು. ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ತಂಬಾಕು ಸಲಹೆಗಾರ ಶಶಿಕಾಂತ ಕುಮಟಳ್ಳಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಕಲಾ ಸಿನ್ನೂರ, ಎನ್ ಸಿಡಿ ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಡಾ.ಅಂದಾನಗೌಡ ಪಾಟೀಲ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಚ್.ಪಿ. ನಾಯ್ಕರ, ಸಮಾಜ ಸೇವಕ ಶಿವಲಿಂಗ ಕರಗಣ್ಣಿ, ಜಿಲ್ಲಾಸ್ಪತ್ರೆ ಹಾಗೂ ಅರಣೋದಯ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿ ಜಾಥಾದಲ್ಲಿ ಭಾಗವಹಿಸಿದ್ದರು.

ಕಾಮೆಂಟ್‌ಗಳು