ಚಿಂಚಲಕಟ್ಟಿ ರೈತರ ಪ್ರತಿಭಟನೆಗೆ ಸ್ಪಂದನೆ: ಕೃಷಿ ಹೊಂಡ ನಿರ್ಮಾಣಕ್ಕೆ ಭರವಸೆ

ಚಿಂಚಲಕಟ್ಟಿ ರೈತರ ಪ್ರತಿಭಟನೆಗೆ ಸ್ಪಂದನೆ: ಕೃಷಿ ಹೊಂಡ ನಿರ್ಮಾಣಕ್ಕೆ ಭರವಸೆ

By  PetkarMedia news desk| bagalkot

ಬೀಳಗಿ: ಚಿಂಚಲಕಟ್ಟಿ ಗ್ರಾಮದ ರೈತ ಹುಸೇನಸಾಬ್ ಮಾಲದಾರ ಅವರ ಕೃಷಿ ಹೊಲದಲ್ಲಿ ಗ್ರಾಮದ ಕೊಳಚೆ ನೀರು ಸಂಗ್ರಹವಾಗಿ ಬಿತ್ತನೆ ಕಾರ್ಯಕ್ಕೆ ಅಡಚಣೆ ಉಂಟಾಗಿರುವುದನ್ನು ಖಂಡಿಸಿ, ಫಕೀರ ಬೂದಿಹಾಳ ಗ್ರಾಮ ಪಂಚಾಯಿತಿ ಕಚೇರಿ ಎದುರು ರೈತರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡ ರಾಮಚಂದ್ರಪ್ಪ ಮೈಲಾರ, ಗ್ರಾಮದ ಕೊಳಚೆ ನೀರು ರೈತರ ಜಮೀನುಗಳಿಗೆ ಹರಿದು ಕೃಷಿ ಭೂಮಿ ಹಾನಿಯಾಗುತ್ತಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ರೈತನ ಹೊಲದಲ್ಲಿ ಸಂಗ್ರಹವಾಗುತ್ತಿರುವ ಕೊಳಚೆ ನೀರನ್ನು ಬೇರೆಡೆ ಸಂಗ್ರಹಿಸಲು ಸೂಕ್ತ ಸ್ಥಳದಲ್ಲಿ ಕೃಷಿ ಹೊಂಡ ನಿರ್ಮಿಸಿ, ನೀರು ನಿರ್ವಹಣೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮನವಿಗೆ ಸ್ಪಂದಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕೃಷಿ ಹೊಂಡ ನಿರ್ಮಾಣಕ್ಕೆ ಅಗತ್ಯ ವೆಚ್ಚದ ಕ್ರಿಯಾಯೋಜನೆ ರೂಪಿಸಿ ಶೀಘ್ರದಲ್ಲೇ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದರು.

ರೈತರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಶಾಶ್ವತ ಪರಿಹಾರ ಒದಗಿಸುವುದು ಪಂಚಾಯಿತಿಯ ಜವಾಬ್ದಾರಿಯಾಗಿದ್ದು, ನೀಡಿರುವ ಭರವಸೆಯನ್ನು ನಿಗದಿತ ಅವಧಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಚಿಂಚಲಕಟ್ಟಿ ಹಾಗೂ ಫಕೀರ ಬೂದಿಹಾಳ ಗ್ರಾಮದ ಮುಖಂಡರು, ರೈತರು ಮತ್ತು ಗ್ರಾಮಸ್ಥರು ಭಾಗವಹಿಸಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಕಾಮೆಂಟ್‌ಗಳು