ಇತರೆ ರಾಜ್ಯಗಳಿಂದ ಆಹ್ವಾನ, ಕರ್ನಾಟಕದಿಂದ ಸ್ಪಂದನೆ ಇಲ್ಲ:ನಿರಾಣಿ
By PetkarMedia News desk:bagalkot
ಬಾಗಲಕೋಟೆ:ಎಥನಾಲ್ ಹಾಗೂ ಬಯೋ ಪ್ಲಾಸ್ಟಿಕ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ಸಂಬಂಧಿಸಿದ ಬೃಹತ್ ಕೈಗಾರಿಕಾ ಯೋಜನೆಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡದಿದ್ದರೆ ಯುವಕರೊಂದಿಗೆ ಹೋರಾಟ ನಡೆಸಲಾಗುವುದು ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಎಚ್ಚರಿಕೆ ನೀಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಮಾರು ₹2,500 ಕೋಟಿಗೂ ಅಧಿಕ ಮೌಲ್ಯದ ಎರಡು ಯೋಜನೆಗಳ ಪ್ರಸ್ತಾವನೆಗಳನ್ನು ಒಂದೂವರೆ ತಿಂಗಳ ಹಿಂದೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿತ್ತು.ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ, ಹಾಗೂ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ’ ಎಂದು ಆರೋಪಿಸಿದರು.
‘ಬಾದಾಮಿ ಹಾಗೂ ಉತ್ತರ ಕರ್ನಾಟಕ ಭಾಗದ ಜನರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಕಷ್ಟು ಬೆಂಬಲ ನೀಡಿದ್ದಾರೆ. ಆದರೆ ಈ ಭಾಗದ ಅಭಿವೃದ್ಧಿಗೆ ಅಗತ್ಯವಾದ ಕೈಗಾರಿಕೆ, ನೀರಾವರಿ, ರಸ್ತೆ ಹಾಗೂ ವಿಮಾನ ನಿಲ್ದಾಣ ಯೋಜನೆಗಳತ್ತ ಸರ್ಕಾರ ಸಮರ್ಪಕ ಗಮನ ಹರಿಸಿಲ್ಲ’ ಎಂದು ಟೀಕಿಸಿದರು.
ಇರಾನ್–ಅಮೆರಿಕಾ ಸಂಘರ್ಷ ಸೇರಿದಂತೆ ಜಾಗತಿಕ ಬೆಳವಣಿಗೆಗಳಿಂದ ಇಂಧನ ಕ್ಷೇತ್ರದಲ್ಲಿ ಅನಿಶ್ಚಿತತೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಪರ್ಯಾಯ ಇಂಧನ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಪ್ರತಿದಿನ 28 ಲಕ್ಷ ಲೀಟರ್ ಉತ್ಪಾದನಾ ಸಾಮರ್ಥ್ಯದ ಎಥನಾಲ್ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಕಬ್ಬಿನ ಮೊಲಾಸಿಸ್, ಜೋಳ, ಅಕ್ಕಿ, ಕೃಷಿ ತ್ಯಾಜ್ಯ, ಹುಲ್ಲು ಹಾಗೂ ಪೌರ ತ್ಯಾಜ್ಯವನ್ನು ಕಚ್ಚಾ ವಸ್ತುವಾಗಿ ಬಳಸಿಕೊಂಡು ಎಥನಾಲ್ ಉತ್ಪಾದನೆ ನಡೆಸುವ ಯೋಜನೆ ರೂಪಿಸಲಾಗಿದೆ. ಪ್ರಸ್ತುತ ವಾಹನಗಳಿಗೆ ಶೇ.30ರವರೆಗೆ ಎಥನಾಲ್ ಮಿಶ್ರಣ ಮಾಡಲಾಗುತ್ತಿದ್ದು, ಹೊಸ ತಲೆಮಾರಿನ ಎಂಜಿನ್‌ಗಳಲ್ಲಿ ಶೇ.100ರಷ್ಟು ಎಥನಾಲ್ ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಹೇಳಿದರು.
ಇದರ ಜತೆಗೆ ಸುಮಾರು ₹3,200 ಕೋಟಿ ವೆಚ್ಚದಲ್ಲಿ ಜೈವಿಕ ಪ್ಲಾಸ್ಟಿಕ್ ಉತ್ಪಾದನಾ ಘಟಕ ಸ್ಥಾಪಿಸುವ ಉದ್ದೇಶವಿದೆ. ಬಳಕೆಯ ಬಳಿಕ ಕಡಿಮೆ ಅವಧಿಯಲ್ಲಿ ಕೊಳೆಯುವ ಮತ್ತು ಪರಿಸರ ಸ್ನೇಹಿಯಾಗಿರುವ ಬಯೋ ಪ್ಲಾಸ್ಟಿಕ್ ಉತ್ಪಾದನೆಯ ಮೂಲಕ ಪ್ಲಾಸ್ಟಿಕ್‌ಗೆ ಪರ್ಯಾಯ ಒದಗಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.
ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ಬಿಹಾರ ಸರ್ಕಾರಗಳು ಯೋಜನೆಗಳಿಗೆ ಭೂಮಿ, ಸಬ್ಸಿಡಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲು ಮುಂದಾಗಿವೆ. ಮಹಾರಾಷ್ಟ್ರ ಸರ್ಕಾರ ಶೇ.50ರಷ್ಟು ಸಬ್ಸಿಡಿ ನೀಡುವುದಾಗಿ ತಿಳಿಸಿದ್ದು, ಆಂಧ್ರ ಪ್ರದೇಶದಲ್ಲಿ 400 ಎಕರೆ ಭೂಮಿ ನೀಡುವ ಪ್ರಸ್ತಾವನೆ ಬಂದಿದೆ. ಬಿಹಾರ ಸರ್ಕಾರವೂ ಹೂಡಿಕೆಗೆ ವಿಶೇಷ ಪ್ರೋತ್ಸಾಹ ನೀಡಲು ಮುಂದಾಗಿದೆ ಎಂದು ಹೇಳಿದರು.
ಆದರೆ ಯೋಜನೆಗಳನ್ನು ಕರ್ನಾಟಕದಲ್ಲಿಯೇ ಜಾರಿಗೊಳಿಸಲು ಮೊದಲ ಆದ್ಯತೆ ನೀಡಲಾಗಿದೆ. ರಾಜ್ಯ ಸರ್ಕಾರ ಮರುಪರಿಶೀಲನೆ ನಡೆಸಿ ಅನುಮೋದನೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟದ ರೂಪುರೇಷೆ ಪ್ರಕಟಿಸಲಾಗುವುದು ಎಂದು ನಿರಾಣಿ ಹೇಳಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ