ಹಿರಿಯ ವಿದ್ಯಾರ್ಥಿಗಳ ಸಂಘದ ಮಾದರಿ ಕಾರ್ಯಕ್ಕೆ ಶಾಸಕ ಉಮೇಶ್ ಮೇಟಿ ಶ್ಲಾಘನೆ
ಬಾಗಲಕೋಟೆ, ಜೂನ್ 28: ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಭದ್ರ ಅಡಿಪಾಯವಾಗಿದ್ದು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರದ ಜೊತೆಗೆ ಸಮಾಜವೂ ಕೈಜೋಡಿಸಬೇಕು ಎಂದು ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಉಮೇಶ್ ಎಚ್. ಮೇಟಿ ಹೇಳಿದರು.
ತಾಲೂಕಿನ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಆಲೂರು ತಾಂಡಾದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ, ಆಲೂರು (ಧರ್ಮನಗರ) ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಶಿಕ್ಷಣ ಸಾಮಗ್ರಿಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಶಾಲೆಯ ಅಭಿವೃದ್ಧಿಗಾಗಿ ಹಳೆಯ ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ಕೈಗೊಂಡಿರುವ ಈ ಸೇವಾ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ. ಇಂತಹ ಮಾದರಿ ಕಾರ್ಯಗಳು ರಾಜ್ಯದಾದ್ಯಂತ ನಡೆಯಬೇಕು.
ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರು ವಿಶ್ವಾಸ ಹೊಂದಬೇಕು. ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಸರ್ಕಾರ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಸಂಪೂರ್ಣ ಸಹಕಾರ ಮುಂದುವರಿಯಲಿದೆ ಎಂದು ಭರವಸೆ ನೀಡಿದರು.
ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸುರೇಶ್ ಲಮಾಣಿ, ಶಾಲೆಯ ಅಭಿವೃದ್ಧಿ ಹಾಗೂ ದಾಖಲಾತಿ ಹೆಚ್ಚಿಸುವ ಉದ್ದೇಶದಿಂದ ಹಿರಿಯ ವಿದ್ಯಾರ್ಥಿಗಳ ಸಂಘ ಹಲವು ತಿಂಗಳುಗಳಿಂದ ಯೋಜಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಮನೆ ಮನೆಗೆ ತೆರಳಿ ಪೋಷಕರಿಗೆ ಸರ್ಕಾರಿ ಶಾಲೆಯ ಗುಣಮಟ್ಟದ ಶಿಕ್ಷಣದ ಕುರಿತು ಜಾಗೃತಿ ಮೂಡಿಸಿದ ಪರಿಣಾಮ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಯಶಸ್ವಿಯಾಗಿ ಆರಂಭಿಸಲು ಸಾಧ್ಯವಾಗಿದೆ.
ಈ ವರ್ಷ ದಾಖಲಾದ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಶಿಕ್ಷಣ ಸಾಮಗ್ರಿಗಳು, ಶೂ ಹಾಗೂ ಸಾಕ್ಸ್ ವಿತರಿಸಲಾಗುತ್ತಿದೆ. ಜೊತೆಗೆ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಸಂಘದ ಸಹಕಾರದೊಂದಿಗೆ ಹೆಚ್ಚುವರಿ ಶಿಕ್ಷಕರನ್ನು ನೇಮಿಸಿ ಗೌರವಧನ ನೀಡಲಾಗುತ್ತಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ದೇವೇಂದ್ರ ಲಮಾಣಿ, ಕೃಷ್ಣ ಪವಾರ್ ಬೆಂಗಳೂರು ಡಿವೈಎಸ್ಪಿ, ಬಲರಾಮ್ ಪವಾರ್, ಸೋಮಸಿಂಗ್ ಲಮಾಣಿ, ಸಂತೋಷ ಲಮಾಣಿ, ಅಶೋಕ ನಾಯಕ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಹಿರಿಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು, ಶಿಕ್ಷಕರು, ಗ್ರಾಮಸ್ಥರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ