ನಾಗರಾಳ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟ: ಹಾನಿಗೊಳಗಾದ ಕುಟುಂಬಕ್ಕೆ ಬಾಗಲಕೋಟೆ ಶಾಸಕ ಉಮೇಶ್ ಮೇಟಿ ಭೇಟಿ

ನಾಗರಾಳ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟ: ಹಾನಿಗೊಳಗಾದ ಕುಟುಂಬಕ್ಕೆ ಬಾಗಲಕೋಟೆ ಶಾಸಕ ಉಮೇಶ್ ಮೇಟಿ ಭೇಟಿ

ಬಾಗಲಕೋಟೆ, ಜೂ.25: ಬಾಗಲಕೋಟೆ ತಾಲೂಕಿನ ನಾಗರಾಳ ಗ್ರಾಮದಲ್ಲಿ  ಶಿವಪ್ಪ ಬಿರಾದರ ಅವರ ಮನೆಯಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟದಿಂದ ಮನೆಗೆ ಉಂಟಾದ ಹಾನಿಯನ್ನು ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಉಮೇಶ್ ಹೆಚ್. ಮೇಟಿ ಅವರು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.


ಸಿಲಿಂಡರ್ ಸ್ಫೋಟದಿಂದ ಹಾನಿಗೊಳಗಾದ ಮನೆಯನ್ನು ವೀಕ್ಷಿಸಿದ ಶಾಸಕ ಉಮೇಶ್ ಮೇಟಿ ಅವರು, ಸಂತ್ರಸ್ತ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ದುರ್ಘಟನೆಯಿಂದ ಕುಟುಂಬಕ್ಕೆ ಉಂಟಾಗಿರುವ ನಷ್ಟದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಸಂಕಷ್ಟದ ಈ ಸಂದರ್ಭದಲ್ಲಿ ಧೈರ್ಯದಿಂದ ಇರಬೇಕೆಂದು ಮನವಿ ಮಾಡಿದರು. ಸರ್ಕಾರದಿಂದ ದೊರೆಯುವ ಪರಿಹಾರ ಹಾಗೂ ಅಗತ್ಯ ನೆರವು ಶೀಘ್ರವಾಗಿ ದೊರೆಯುವಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಬಳಿಕ ಸಂಬಂಧಿಸಿದ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಶಾಸಕ ಉಮೇಶ್ ಮೇಟಿ, ಘಟನೆಯ ಕುರಿತು ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರದ ನಿಯಮಾನುಸಾರ ಸಿಗಬೇಕಾದ ಪರಿಹಾರ ಹಾಗೂ ಇತರೆ ಅಗತ್ಯ ನೆರವನ್ನು ವಿಳಂಬವಿಲ್ಲದೆ ಒದಗಿಸುವಂತೆ ಸೂಚಿಸಿದರು.ಈ ಸಂದರ್ಭದಲ್ಲಿ ಹಣಮಂತ ಗಣಿ, ಜಟ್ಟಪ್ಪ ಮಾದಪುರ, ಹನುಮಂತ ದಡ್ಡಿ ಸೇರಿದಂತೆ ಸ್ಥಳೀಯ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು