ಬೆಳಗಾವಿ: ಗಂಡು ಮಗು ಪಾರ್ಟಿ ವಿಚಾರಕ್ಕೆ ಸ್ನೇಹಿತನ ಕೊಲೆ – ಬೈಲಹೊಂಗಲದಲ್ಲಿ ಬೆಚ್ಚಿಬೀಳಿಸಿದ ಘಟನೆ

ಬೆಳಗಾವಿ:ಗಂಡು ಮಗು ಹುಟ್ಟಿದ ಹಿನ್ನೆಲೆಯಲ್ಲಿ ಪಾರ್ಟಿ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಹಣಮಂತ ಯಮನಪ್ಪ ಇಟಗಿ ಎಂದು ಗುರುತಿಸಲಾಗಿದೆ. ಆರೋಪಿ ವಿಶ್ವನಾಥ ಪೂಜೇರಿ.

ಮೋಹರಂ ಹಬ್ಬದ ವೇಳೆ ಇಬ್ಬರೂ ಮದ್ಯ ಸೇವಿಸಿ ಗ್ರಾಮದ ಕಟ್ಟೆಯ ಬಳಿ ಕುಳಿತಿದ್ದಾಗ ಪಾರ್ಟಿ ವಿಚಾರವಾಗಿ ವಾಗ್ವಾದ ನಡೆದಿದೆ. ಜಗಳದ ವೇಳೆ ಹಣಮಂತನ ಬೆರಳು ವಿಶ್ವನಾಥನ ಕಣ್ಣಿಗೆ ತಾಗಿದ್ದು, ಇದರಿಂದ ಆಕ್ರೋಶಗೊಂಡ ವಿಶ್ವನಾಥ ಕಲ್ಲಿನಿಂದ ಹಣಮಂತನ ತಲೆಗೆ ಹೊಡೆದಿದ್ದಾನೆ.

belagavi-bailhongal-party-dispute-friend-murder-vannur

ತೀವ್ರ ರಕ್ತಸ್ರಾವದಿಂದ ಹಣಮಂತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದರೂ, ನೇಸರಗಿ ಠಾಣೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಕಾಮೆಂಟ್‌ಗಳು