ಸೆಕ್ಟರ್ ನಂ.10ರಲ್ಲಿ ಬ್ಲಾಕ್ ಆದ ಒಳಚರಂಡಿ: ಸ್ಥಳೀಯರ ಆಕ್ರೋಶ

 ಬಾಗಲಕೋಟೆ: ನಗರದ ನವನಗರ ಸೆಕ್ಟರ್ ನಂ.10ರಲ್ಲಿ ಒಳಚರಂಡಿ (ಡ್ರೈನೇಜ್) ಬ್ಲಾಕ್ ಆಗಿ ಕಳೆದ ಎರಡು-ಮೂರು ದಿನಗಳಿಂದ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.




ಕೊಳಚೆ ನೀರು ರಸ್ತೆಯಲ್ಲೇ ನಿಂತಿರುವುದರಿಂದ ಮಕ್ಕಳು, ಹಿರಿಯ ನಾಗರಿಕರು ಹಾಗೂ ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿದೆ. ದುರ್ವಾಸನೆ ಹಾಗೂ ಅಸ್ವಚ್ಛತೆಯಿಂದ ಸ್ಥಳೀಯರಲ್ಲಿ ಆರೋಗ್ಯದ ಆತಂಕವೂ ಹೆಚ್ಚಾಗಿದೆ.

ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಾಹಿತಿ ನೀಡಿದರೂ ಇದುವರೆಗೆ ಸಮಸ್ಯೆ ಪರಿಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೊನೆಗೆ ನಗರಸಭೆಯ ನೆರವಿಗಾಗಿ ಕಾಯದೆ ಸ್ಥಳೀಯ ನಿವಾಸಿಗಳೇ ಸ್ವತಃ ಒಳಚರಂಡಿಯ ಅಡಚಣೆ ತೆರವುಗೊಳಿಸಿ ನೀರು ಹರಿಯುವಂತೆ ಮಾಡಿದ್ದಾರೆ.

ಇನ್ನಾದರೂ ನಗರಸಭೆ ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತವಾಗಿ ಡ್ರೈನೇಜ್ ವ್ಯವಸ್ಥೆ ಸರಿಪಡಿಸಬೇಕು. ಇಂತಹ ಸಮಸ್ಯೆ ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಾಮೆಂಟ್‌ಗಳು