ಚಿತ್ರದುರ್ಗದಲ್ಲಿ ಜುಲೈ 19ರಂದು 'ರಾಷ್ಟ್ರೀಯ ಭೋವಿ ಜನೋತ್ಸವ'

ಬಾಗಲಕೋಟೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಲು ಕರೆ

ಬಾಗಲಕೋಟೆ, ಜು. 13: ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಗಳ 17ನೇ ಪಟ್ಟಾಭಿಷೇಕ ಮಹೋತ್ಸವ, 28ನೇ ಲಾಂಛನ ದೀಕ್ಷಾ ಮಹೋತ್ಸವ ಹಾಗೂ 40ನೇ ಜನ್ಮವರ್ಧಂತ್ಯೋತ್ಸವದ ಅಂಗವಾಗಿ ಜುಲೈ 19ರಂದು ಚಿತ್ರದುರ್ಗದಲ್ಲಿ ಬೃಹತ್ ಮಟ್ಟದಲ್ಲಿ 'ರಾಷ್ಟ್ರೀಯ ಭೋವಿ ಜನೋತ್ಸವ' ಆಯೋಜಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಬಾಗಲಕೋಟೆ ಭೋವಿ ಗುರುಪೀಠದಲ್ಲಿ ನಡೆದ ಜಿಲ್ಲಾಮಟ್ಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಮಾಜದ ಮುಖಂಡ ಸತೀಶ ಬಂಡಿ, ಬಾಗಲಕೋಟೆ ಜಿಲ್ಲೆಯ ಭೋವಿ-ವಡ್ಡರ ಸಮಾಜದ ಬಾಂಧವರು ಸಹಸ್ರಾರು ಸಂಖ್ಯೆಯಲ್ಲಿ ಜನೋತ್ಸವದಲ್ಲಿ ಭಾಗವಹಿಸುವಂತೆ ಕರೆ ನೀಡಿದರು.

ಈ ಬಾರಿಯ ಜನೋತ್ಸವದಲ್ಲಿ ರಾಜ್ಯದ ಪ್ರಮುಖ ರಾಜಕೀಯ ನಾಯಕರು, ಸಚಿವರು, ಶಾಸಕರು, ಸಂಸದರು, ಸಮಾಜದ ಹಿರಿಯ ಮುಖಂಡರು, ಐಎಎಸ್ ಹಾಗೂ ಕೆಎಎಸ್ ಅಧಿಕಾರಿಗಳು ಸೇರಿದಂತೆ ವಿವಿಧ ರಾಜ್ಯಗಳ ಭೋವಿ ಸಮಾಜದ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ಸಿದ್ದು ಬಂಡಿ, ಭೋವಿ ಜನೋತ್ಸವವು ಕೇವಲ ಧಾರ್ಮಿಕ ಆಚರಣೆಯಲ್ಲ; ಸಮಾಜದ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ವೇದಿಕೆಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು, ಪಿಎಚ್‌.ಡಿ ಪದವೀಧರರು ಹಾಗೂ ಎಂ.ಬಿ.ಬಿ.ಎಸ್ ಪೂರ್ಣಗೊಳಿಸಿದ ಸಾಧಕರಿಗೆ ಸನ್ಮಾನ ನಡೆಯಲಿದೆ. ಅಲ್ಲದೆ ರಕ್ತದಾನ ಶಿಬಿರ, ಸಿದ್ಧರಾಮೇಶ್ವರರ ಕುರಿತು ವಿಶೇಷ ವಿಚಾರ ಸಂಕಿರಣ, ಸಮಾಜಕ್ಕೆ ವಿಶೇಷ ಸೇವೆ ಸಲ್ಲಿಸಿದ ಸಾಧಕರಿಗೆ ಗೌರವ ಸಮರ್ಪಣೆ, ಹಸಿರೋತ್ಸವ ಹಾಗೂ ಯುವಜನರಿಗಾಗಿ ವಧು-ವರರ ಸಮಾವೇಶ ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗಲಿವೆ ಎಂದು ಮಾಹಿತಿ ನೀಡಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭೋವಿ ಸಮಾಜದ ಬಾಂಧವರು ಈ ಭವ್ಯ ಜನೋತ್ಸವದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಸಭೆಯಲ್ಲಿ ಸಮಾಜದ ವಿವಿಧ ಜಿಲ್ಲೆಗಳ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಮೆಂಟ್‌ಗಳು