ಕಳ್ಳತನ:₹7.80 ಲಕ್ಷ ಮೌಲ್ಯದ ಮಾಲು ವಶ, ಐವರು ಆರೋಪಿಗಳ ಬಂಧನ

ಕಲಾದಗಿ ಠಾಣೆ ಪೊಲೀಸರ ಕಾರ್ಯಾಚರಣೆ: ಜ್ಯುವೆಲ್ಲರಿ, ಹಾರ್ಡ್‌ವೇರ್ ಅಂಗಡಿ ಕಳ್ಳತನ ಹಾಗೂ ಜಬರಿ ಕಳ್ಳತನ ಪ್ರಕರಣ ಭೇದ

₹7.80 ಲಕ್ಷ ಮೌಲ್ಯದ ಮಾಲು ವಶ, ಐವರು ಆರೋಪಿಗಳ ಬಂಧನ

ಬಾಗಲಕೋಟೆ, ಜುಲೈ 15: ಜಿಲ್ಲೆಯ ಕಲಾದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಜ್ಯುವೆಲ್ಲರಿ ಅಂಗಡಿ, ಹಾರ್ಡ್‌ವೇರ್ ಅಂಗಡಿ ಕಳ್ಳತನ ಹಾಗೂ ಜಬರಿ ಕಳ್ಳತನ ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ₹7.80 ಲಕ್ಷ ಮೌಲ್ಯದ ಬೆಳ್ಳಿಯ ಆಭರಣ, ಹಾರ್ಡ್‌ವೇರ್ ಸಾಮಗ್ರಿಗಳು, ಮೊಬೈಲ್ ಹಾಗೂ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಿಮಿಕೇರಿ ಬೈಪಾಸ್ ಸಮೀಪದ ಮೌನೇಶ್ವರ ಜ್ಯುವೆಲ್ಲರಿ ಅಂಗಡಿಯಲ್ಲಿ ಜೂನ್ 29ರ ಮಧ್ಯರಾತ್ರಿ ಕಳ್ಳತನ ನಡೆದಿತ್ತು. ಅದಕ್ಕೂ ಮುನ್ನ ಜೂನ್ 19ರಂದು ಕಲಾದಗಿ ಗ್ರಾಮದ ಬೆಳಗಾವಿ ರಸ್ತೆಯ ಹಾರ್ಡ್‌ವೇರ್ ಅಂಗಡಿಯಲ್ಲೂ ಕಳ್ಳತನ ನಡೆದಿತ್ತು. ಇದೇ ಪ್ರಕರಣಗಳ ತನಿಖೆ ವೇಳೆ ಕೆರೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಜಬರಿ ಕಳ್ಳತನ ಪ್ರಕರಣವೂ ಭೇದಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬಾಂದಬಾಷಾ ಚಿತ್ತಾಪೂರ (ನವನಗರ, ಬಾಗಲಕೋಟೆ), ಮಾರುತಿ @ ರಾಜಾ ವಡ್ಡರ (ಚಿಂಚಲಿ, ರಾಯಬಾಗ), ಮಹಮ್ಮದ್‌ಕೆನ್ ಕಲಾದಗಿ, ರಿಯಾಜ್ ಮಕಾನದಾರ (ಕಲಾದಗಿ) ಹಾಗೂ ಹನಮಂತ ಹರಿಜನ @ ಮಾದರ (ಬದನೂರ, ಮುಧೋಳ) ಎಂದು ಗುರುತಿಸಲಾಗಿದೆ.

ಆರೋಪಿಗಳನ್ನು ಗದ್ದನಕೇರಿ ಕ್ರಾಸ್ ಬಳಿ ಬಂಧಿಸಿ ವಿಚಾರಣೆ ನಡೆಸಿದಾಗ, ಅವರಿಂದ ಸುಮಾರು 2.5 ಕೆಜಿ ಬೆಳ್ಳಿಯ ಆಭರಣ, ಎರಡು ಮೋಟಾರ್‌ಸೈಕಲ್‌, ಹಾರ್ಡ್‌ವೇರ್ ಸಾಮಗ್ರಿಗಳು ಹಾಗೂ ಜಬರಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಮೊಬೈಲ್ ಸೇರಿ ಒಟ್ಟು ₹7.80 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಸಿದ್ದಾರ್ಥ ಗೋಯೆಲ್ (ಐಪಿಎಸ್) ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ್ ಎಂ., ಡಿಎಸ್‌ಪಿ ಗಜಾನನ ಸುತಾರ, ಸಿಪಿಐ ಆರ್.ಎಸ್. ಬಿರಾದಾರ, ಪಿಎಸ್‌ಐ ಪ್ರವೀಣ ಬೀಳಗಿ ಹಾಗೂ ಕಲಾದಗಿ ಠಾಣೆ ಸಿಬ್ಬಂದಿ ಮತ್ತು ಜಿಲ್ಲಾ ಗಣಕಯಂತ್ರ ವಿಭಾಗದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿ, ಸೂಕ್ತ ನಗದು ಬಹುಮಾನ ಘೋಷಿಸಿದ್ದಾರೆ.

ಕಾಮೆಂಟ್‌ಗಳು