ದೇಶಸೇವೆ ಮುಗಿಸಿ ಊರಿಗೆ ಮರಳಿದ ಯೋಧ ರಮೇಶ ನೀರಲಗಿ ಅವರಿಗೆ ಅದ್ಧೂರಿ ಸ್ವಾಗತ
ಬಾಗಲಕೋಟೆ, ಜುಲೈ 2: ದೇಶಕ್ಕಾಗಿ 22 ವರ್ಷಗಳ ಕಾಲ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಯೋಧ ರಮೇಶ ಅಯ್ಯಪ್ಪ ನೀರಲಗಿ ಅವರಿಗೆ ಬಾದಾಮಿ ತಾಲೂಕಿನ ಬೇಡರಬೂದಿಹಾಳ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತ ಕೋರಿದರು.
ಭಾರತೀಯ ಸೈನ್ಯದ ಮದ್ರಾಸ್ ರೆಜಿಮೆಂಟ್ನಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ರಮೇಶ ನೀರಲಗಿ ಅವರು ಗುರುವಾರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ, ಬಾದಾಮಿ ರೈಲು ನಿಲ್ದಾಣದಲ್ಲಿ ಗ್ರಾಮಸ್ಥರು ಹೂಮಾಲೆ ಹಾಕಿ ಆತ್ಮೀಯವಾಗಿ ಬರಮಾಡಿಕೊಂಡರು.
ಬಳಿಕ ಬಾದಾಮಿ ರೈಲು ನಿಲ್ದಾಣದಿಂದ ಚಿಕ್ಕಮುಚ್ಚಳಗುಡ್ಡ ಮಾರ್ಗವಾಗಿ ಬೇಡರಬೂದಿಹಾಳ ಗ್ರಾಮವರೆಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯುದ್ದಕ್ಕೂ ಗ್ರಾಮಸ್ಥರು ಪುಷ್ಪವೃಷ್ಟಿ ಸುರಿಸಿ, ಜಯಘೋಷಗಳೊಂದಿಗೆ ಯೋಧನಿಗೆ ಗೌರವ ಸಲ್ಲಿಸಿದರು. ಈ ಅದ್ಧೂರಿ ಸ್ವಾಗತ ಗ್ರಾಮದಲ್ಲಿ ದೇಶಭಕ್ತಿಯ ವಾತಾವರಣವನ್ನು ಮೂಡಿಸಿತು.
ಯೋಧ ರಮೇಶ ನೀರಲಗಿ ಅವರು ದೇಶಸೇವೆಯ ಜೊತೆಗೆ ಸಮಾಜಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದು, ತಮ್ಮೂರಿನ ಶಾಲೆಯ ಅಭಿವೃದ್ಧಿಗೆ ದೇಣಿಗೆ ನೀಡಿ ಶಿಕ್ಷಣಕ್ಕೆ ವಿಶೇಷ ಪ್ರೋತ್ಸಾಹ ನೀಡಿದ್ದಾರೆ. ಅವಿಭಕ್ತ ಕುಟುಂಬದಲ್ಲಿ ಬೆಳೆದ ಅವರು "ದೇಶಸೇವೆ ತಾಯಿಸೇವೆ" ಎಂಬ ಧ್ಯೇಯದೊಂದಿಗೆ 22 ವರ್ಷಗಳ ಕಾಲ ರಾಷ್ಟ್ರಸೇವೆ ಸಲ್ಲಿಸಿ ಇದೀಗ ಸ್ವಗ್ರಾಮಕ್ಕೆ ಮರಳಿದ್ದಾರೆ.
ಗ್ರಾಮಸ್ಥರು ಯೋಧನ ಸೇವೆಯನ್ನು ಸ್ಮರಿಸಿ ಅಭಿನಂದನೆ ಸಲ್ಲಿಸಿದ್ದು, ಯುವಕರು ದೇಶಸೇವೆಗೆ ಪ್ರೇರಣೆ ಪಡೆಯಬೇಕು ಎಂದು ಅಭಿಪ್ರಾಯಪಟ್ಟರು.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ