ಬಾಗಲಕೋಟೆ: ಮತದಾರರ ಪಟ್ಟಿ ಪರಿಷ್ಕರಣೆ ಯಶಸ್ವಿಗೆ ಸಾರ್ವಜನಿಕರ ಸಹಕಾರ ಅಗತ್ಯ – ಸೈಕಲ್ ಜಾಥಾ ಮೂಲಕ ಜಾಗೃತಿ
ಬಾಗಲಕೋಟೆ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಚುನಾವಣಾ ಇಲಾಖೆ ವತಿಯಿಂದ ನಗರದಲ್ಲಿ ಸೈಕಲ್ ಜಾಥಾ ನಡೆಸಲಾಯಿತು.
ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ ಜಾಥಾಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಂಗಪ್ಪ, ಪ್ರತಿಯೊಬ್ಬ ಅರ್ಹ ನಾಗರಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಕಡ್ಡಾಯವಾಗಿ ಪರಿಶೀಲಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಮತದಾರರ ಪಟ್ಟಿಯ ಶುದ್ಧತೆ ಕಾಪಾಡಲು ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯವಾಗಿದ್ದು, ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಮಾಹಿತಿಯನ್ನು ನೀಡುವಂತೆ ಕರೆ ನೀಡಿದರು.
ವಿದ್ಯಾರ್ಥಿಗಳು, ಬಿಎಲ್‌ಒಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಎಸ್‌ಐಆರ್ ಕುರಿತು ಜಾಗೃತಿ ಫಲಕಗಳನ್ನು ಪ್ರದರ್ಶಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಸೈಕಲ್ ಜಾಥಾ ನಡೆಸಿದರು. ವಿದ್ಯಾಗಿರಿ ವೃತ್ತದಿಂದ ಆರಂಭವಾದ ಜಾಥಾ 14ನೇ ಕ್ರಾಸ್, ಕಲಾದಗಿ ಮೇನ್ ರೋಡ್, ಅಯೋಧ್ಯಾ ಹೋಟೆಲ್ ಕ್ರಾಸ್, 22ನೇ ಕ್ರಾಸ್, ಪಂಜುರ್ಲಿ ಹೋಟೆಲ್ ಮಾರ್ಗವಾಗಿ ಮರಳಿ ವಿದ್ಯಾಗಿರಿ ವೃತ್ತದಲ್ಲಿ ಸಮಾಪ್ತಿಯಾಯಿತು.
ಜಾಥಾದಲ್ಲಿ ಜಿ.ಪಂ. ಸಿಇಒ ಗಜಾನನ ಬಾಲೆ, ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಶೀಲ್ದಾರ ವಾಸುದೇವ ಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ